ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈದಾನದಲ್ಲಿ ಬೌಂಡರಿ–ಸಿಕ್ಸರ್‌ಗಳಿಂದ ಪಂದ್ಯ ಗೆಲ್ಲಿಸಿದ್ದ ಯುವ ತಾರೆ ಇದೀಗ ಸರ್ಕಾರಿ ಸೇವೆಯಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ವಿಶ್ವಕಪ್ ಗೆಲುವು ತಂದುಕೊಟ್ಟ ಪ್ರಮುಖ ಆಟಗಾರ್ತಿ ರಿಚಾ ಘೋಷ್ ಅವರಿಗೆ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಒಲಿದಿದೆ.
ಬುಧವಾರ ಅವರು ಸಿಲಿಗುರಿ ಪೊಲೀಸ್ ಕಮಿಷನರೇಟ್‌ನಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ವಿಶ್ವಕಪ್ ಗೆಲುವಿನ ಬಳಿಕ ಕ್ರೀಡಾ ಸಾಧನೆಗೆ ಗೌರವವಾಗಿ ಸರ್ಕಾರ ನೀಡಿದ್ದ ಭರವಸೆಯಂತೆ ಈ ನೇಮಕಾತಿ ನಡೆದಿದೆ. ಕಳೆದ ತಿಂಗಳು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಿಚಾ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ನವೆಂಬರ್ ತಿಂಗಳಲ್ಲಿ ಕೊಲ್ಕತ್ತಾದ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ರಿಚಾ, ಇದೀಗ ನೇರವಾಗಿ ಸಿಲಿಗುರಿಯಲ್ಲಿ ಕರ್ತವ್ಯ ಆರಂಭಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಪೊಲೀಸ್ ಪ್ರಕಟಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ 24 ಎಸೆತಗಳಲ್ಲಿ 34 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದ ರಿಚಾ, ಇಡೀ ಟೂರ್ನಿಯಲ್ಲಿ 235 ರನ್‌ಗಳನ್ನು ಗಳಿಸಿದ್ದರು. ಅವರ ಈ ಅದ್ಭುತ ಪ್ರದರ್ಶನಕ್ಕೆ ಬಂಗಾಳ ಕ್ರಿಕೆಟ್ ಸಂಸ್ಥೆ ರೂ.34 ಲಕ್ಷ ನಗದು ಬಹುಮಾನ, ಚಿನ್ನದ ಬ್ಯಾಟ್ ಮತ್ತು ಚೆಂಡಿನ ಪ್ರತಿಕೃತಿಗಳೊಂದಿಗೆ ಗೌರವಿಸಿತ್ತು.

