Tuesday, January 13, 2026
Tuesday, January 13, 2026
spot_img

ಆರ್​ಸಿಬಿ ಅಬ್ಬರಕ್ಕೆ ಯುಪಿ ಧೂಳಿಪಟ: ಸ್ಮೃತಿ ಮಂಧಾನ ಸೈನ್ಯಕ್ಕೆ ಸತತ ಎರಡನೇ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಜೇಯ ಓಟ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದ್ದ ಸ್ಮೃತಿ ಮಂಧಾನ ಪಡೆ, ಈಗ ಯುಪಿ ವಾರಿಯರ್ಸ್ ತಂಡವನ್ನು 9 ವಿಕೆಟ್‌ಗಳ ಬೃಹತ್ ಅಂತರದಿಂದ ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡಕ್ಕೆ ಆರ್​ಸಿಬಿ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಲಾರೆನ್ ಬೆಲ್ ಮತ್ತು ಶ್ರೇಯಾಂಕ ಪಾಟೀಲ್ ಅವರ ಶಿಸ್ತಿನ ದಾಳಿಗೆ ಯುಪಿ ತತ್ತರಿಸಿತು. ಕೇವಲ 50 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ದೀಪ್ತಿ ಶರ್ಮಾ (45) ಮತ್ತು ಡಿಯಾಂಡ್ರಾ ಡಾಟಿನ್ (40) ಆಸರೆಯಾದರು. ಇವರ ಅಜೇಯ 93 ರನ್‌ಗಳ ಜೊತೆಯಾಟದ ನೆರವಿನಿಂದ ಯುಪಿ ನಿಗದಿತ ಓವರ್‌ಗಳಲ್ಲಿ 144 ರನ್ ಕಲೆಹಾಕಿತು.

145 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಆರಂಭಿಕರಾದ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ ಸ್ಫೋಟಕ ಆರಂಭ ನೀಡಿದರು. ಅದರಲ್ಲೂ ಹ್ಯಾರಿಸ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಡಿಯಾಂಡ್ರಾ ಡಾಟಿನ್ ಎಸೆದ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 32 ರನ್ ಚಚ್ಚಿದ ಹ್ಯಾರಿಸ್, ಕೇವಲ 22 ಎಸೆತಗಳಲ್ಲಿ ಈ ಆವೃತ್ತಿಯ ವೇಗದ ಅರ್ಧಶತಕ ಪೂರೈಸಿದರು.

ಶತಕದ ಸನಿಹದಲ್ಲಿದ್ದ ಹ್ಯಾರಿಸ್ 85 ರನ್ (40 ಎಸೆತ, 10 ಬೌಂಡರಿ, 5 ಸಿಕ್ಸರ್) ಗಳಿಸಿ ಔಟಾದರು. ಆದರೆ ಅಷ್ಟರಲ್ಲಾಗಲೇ ಆರ್​ಸಿಬಿ ಗೆಲುವು ಖಚಿತವಾಗಿತ್ತು. ನಾಯಕಿ ಸ್ಮೃತಿ ಮಂಧಾನ (47*) ಜವಾಬ್ದಾರಿಯುತ ಆಟವಾಡಿ ತಂಡವನ್ನು 12.1 ಓವರ್‌ಗಳಲ್ಲೇ ಗುರಿ ಮುಟ್ಟಿಸಿದರು. ಈ ಭರ್ಜರಿ ಜಯದೊಂದಿಗೆ ಆರ್​ಸಿಬಿ ತನ್ನ ನೆಟ್ ರನ್ ರೇಟ್ ಅನ್ನು ಗಣನೀಯವಾಗಿ ಸುಧಾರಿಸಿಕೊಂಡಿದೆ.

Most Read

error: Content is protected !!