ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಕಮ್ಯುನಿಕೇಷನ್ಸ್ (RCOM), ಅದರ ಅಂಗ ಸಂಸ್ಥೆಗಳು ಮತ್ತು ಪ್ರವರ್ತಕರು ಸೇರಿದ ದೊಡ್ಡ ಬ್ಯಾಂಕಿಂಗ್ ಹಾಗೂ ಕಾರ್ಪೊರೇಟ್ ವಂಚನೆ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ಸಿಬಿಐ, ಇಡಿ, ಅನಿಲ್ ಅಂಬಾನಿ ಮತ್ತು ಇತರರಿಗೆ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು, ಪಿಐಎಲ್ ಅರ್ಜಿದಾರರು ಮತ್ತು ಕೇಂದ್ರದ ಮಾಜಿ ಕಾರ್ಯದರ್ಶಿ ಇಎಎಸ್ ಶರ್ಮಾ ಪರ ವಕೀಲ ಪ್ರಶಾಂತ್ ಭೂಷಣ್ ಮಾಡಿದ ಸಲ್ಲಿಕೆಯನ್ನು ಪರಿಗಣಿಸಿ, ಮೂರು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸಂಬಂಧಿತ ಪಕ್ಷಗಳಿಗೆ ಸೂಚಿಸಿದೆ.
ಪಿಐಎಲ್‌ನಲ್ಲಿ, ವಂಚನೆ ಪ್ರಕರಣದಲ್ಲಿ ಬ್ಯಾಂಕುಗಳು ಮತ್ತು ಅವರ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖಾ ಸಂಸ್ಥೆಗಳು ಸೂಕ್ತ ಪರಿಶೀಲನೆ ನಡೆಸಲಿಲ್ಲ ಎಂದು ಆರೋಪಿಸಲಾಗಿದ್ದು, ಸಿಬಿಐ ಮತ್ತು ಇಡಿಗೆ ಈ ಕುರಿತು ಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲು ಅರ್ಜಿದಾರರು ಮನವಿ ಮಾಡಿದ್ದಾರೆ.

