ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಂವಹನ, ಮನರಂಜನೆ, ಕೆಲಸ, ಅಧ್ಯಯನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಫೋನ್ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಅತಿಯಾದ ಬಳಕೆ ಯಾವಾಗಲೂ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ. ವಿಶೇಷವಾಗಿ ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.
ಹಾರ್ವರ್ಡ್ ವೈದ್ಯಕೀಯ ಶಾಲೆಯ ನಡೆಸಿದ ಸಂಶೋಧನೆ ಪ್ರಕಾರ, ಶೌಚಾಲಯದಲ್ಲಿ ಫೋನ್ ಬಳಸುವವರಲ್ಲಿ ಮೂಲವ್ಯಾಧಿ ಬರುವ ಅಪಾಯವು 46% ಹೆಚ್ಚಾಗಿದೆ. ಸುಮಾರು 125 ಮಂದಿ ಪುರುಷರು ಹಾಗೂ ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ, 66% ಜನರು ಶೌಚಾಲಯದಲ್ಲಿ ತಮ್ಮ ಸ್ಮಾರ್ಟ್‌ಫೋನ್ ಬಳಸುವುದಾಗಿ ಒಪ್ಪಿಕೊಂಡಿದ್ದಾರೆ. ಕೊಲೊನೋಸ್ಕೋಪಿ ಪರೀಕ್ಷೆಯ ಫಲಿತಾಂಶದಲ್ಲಿ, ಫೋನ್ ಬಳಸದವರಲ್ಲಿ ಕೇವಲ 38% ಮಂದಿಗೆ ಮಾತ್ರ ಮೂಲವ್ಯಾಧಿ ಕಂಡುಬಂದರೆ, ಫೋನ್ ಬಳಸುವವರಲ್ಲಿ ಇದು 51% ಜನರಲ್ಲಿ ಕಂಡುಬಂದಿದೆ.
ತಜ್ಞರ ಪ್ರಕಾರ, ಶೌಚಾಲಯದಲ್ಲಿ ದೀರ್ಘಕಾಲ ಕಳೆಯುವ ಅಭ್ಯಾಸವು ಗುದದ್ವಾರದ ಸುತ್ತಮುತ್ತಲಿನ ರಕ್ತನಾಳಗಳಿಗೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಅವು ಊದಿಕೊಂಡು ನೋವು ಹಾಗೂ ರಕ್ತಸ್ರಾವ ಉಂಟಾಗುವ ಮೂಲವ್ಯಾಧಿ ಸಮಸ್ಯೆ ಎದುರಾಗಬಹುದು. ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ಸ್ಕ್ರೋಲ್ ಮಾಡುವುದು, ವೀಡಿಯೊ ವೀಕ್ಷಿಸುವುದು ಅಥವಾ ಸುದ್ದಿಗಳನ್ನು ಓದುವಂತೆ ಚಟುವಟಿಕೆಗಳಿಂದ ಜನರು ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುವ ಪ್ರವೃತ್ತಿ ಹೊಂದಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.
ಅದರ ಜೊತೆಗೆ, ಆಹಾರ ಪದ್ಧತಿಗಳೂ ಮಹತ್ವದ್ದಾಗಿದೆ. ಕಡಿಮೆ ಫೈಬರ್ ಹಾಗೂ ಹೆಚ್ಚಿನ ಜಂಕ್ ಫುಡ್ ಇರುವ ಆಹಾರ ಕ್ರಮವು ಮಲಬದ್ಧತೆಗೆ ಕಾರಣವಾಗುತ್ತದೆ. ಇದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಹೆಚ್ಚುತ್ತವೆ. ಹಣ್ಣುಗಳು, ತರಕಾರಿಗಳು ಹಾಗೂ ಧಾನ್ಯಗಳಂತಹ ಫೈಬರ್‌ಯುಕ್ತ ಆಹಾರ ಸೇವನೆ ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.