ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹಾಳಾದ ರಸ್ತೆಗಳ ಬಗ್ಗೆ ಸಾರ್ವಜನಿಕರ ಟ್ರೋಲ್‌ಗಳು, ಮೀಮ್ಸ್‌ಗಳು, ವಿದೇಶಿಗರು ಹಾಗೂ ಉದ್ಯಮಿಗಳ ಆಕ್ಷೇಪಣೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಿಎಂ ಕೇವಲ ಒಂದು ವಾರದ ಗಡುವು ನೀಡಿದ್ದು, ರಸ್ತೆಗಳ ಸ್ಥಿತಿ ಸುಧಾರಿಸಲು ಹೊಸ ಟಾರ್ ಹಾಕುವಂತೆ ನಿರ್ದೇಶಿಸಿದ್ದಾರೆ.
ಮಂಗಳವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಆಧುನೀಕರಣ ಮತ್ತು ವೈಟ್-ಟಾಪಿಂಗ್ ಕಾಮಗಾರಿಗಳ ಆರಂಭಕ್ಕೆ ನಡೆದ ಗುಸ್ಲಿ ಪೂಜೆಯ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ಆದೇಶಗಳನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಉಪಸ್ಥಿತರಿದ್ದರು.
ಬೆಂಗಳೂರು ಇತಿಹಾಸದ ನೆನಪು, ಮೂಲಸೌಕರ್ಯದ ಅಗತ್ಯ:
ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕೆಂಪೇಗೌಡರ ಕಾಲದಲ್ಲಿ ಅನೇಕ ಬೀದಿಗಳು ಮಾರುಕಟ್ಟೆ ರಸ್ತೆಗಳಾಗಿ ಪ್ರಮುಖ ಮೌಲ್ಯವನ್ನು ಪಡೆದಿದ್ದವು ಎಂದು ಸ್ಮರಿಸಿದರು. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಜನಸಂಖ್ಯೆಗೆ ಉತ್ತಮ ಮೂಲಸೌಕರ್ಯಗಳು ಅತ್ಯಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಬೆಂಗಳೂರಿನ ಅಭಿವೃದ್ಧಿಗಾಗಿ ಸರ್ಕಾರವು ಹಿಂದೆಯೂ ಹೂಡಿಕೆ ಮಾಡಿದೆ, ಮುಂದೆಯೂ ಮಾಡುತ್ತದೆ ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಟೀಕೆ:
ಇದೇ ವೇಳೆ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ತೆರಿಗೆ ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಟೀಕಿಸಿದರು. ಬೆಂಗಳೂರು ಮೆಟ್ರೋಗೆ ಹೂಡಿಕೆ ಮಾಡಿದ ಹಣದಲ್ಲಿ ಶೇ. 87ರಷ್ಟು ರಾಜ್ಯದ ತೆರಿಗೆದಾರರಿಂದ ಬಂದಿದೆ ಎಂದು ಅವರು ಹೇಳಿದರು. ಅಲ್ಲದೆ, ಜಿಎಸ್‌ಟಿ ನೀತಿಯಲ್ಲಿನ ಬದಲಾವಣೆಗಳಿಂದಾಗಿ ಕರ್ನಾಟಕ ರಾಜ್ಯವು ಸುಮಾರು ₹ 15,000 ಕೋಟಿ ನಷ್ಟ ಅನುಭವಿಸಿದೆ ಎಂದು ದೂರಿದರು.

