Monday, November 17, 2025

‘ಪವರ್ ಶೇರ್’ ಕೂಗಿಗೆ ಸಿದ್ದು ಗುಟುರು: ಹೈಕಮಾಂಡ್‌ನದ್ದೇ ಕೊನೆ ಮಾತು! 15+ ಸಚಿವರು ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ‘ಈ ಸಲ ಕಡೆಯಾಟ’ ಎಂಬ ಕೂಗು ಜೋರಾಗಿದೆ.

ಮೈಸೂರಿನಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ, ನವೆಂಬರ್ 15ರ ನಂತರ ಹೊಸ ರಾಜಕೀಯ ನಡೆಗೆ ಮುನ್ಸೂಚನೆ ನೀಡಿದ್ದಾರೆ. ‘ಪವರ್ ಶೇರ್’ ಬಗ್ಗೆ ಯಾರೇ ಮಾತನಾಡಲಿ, ಹೈಕಮಾಂಡ್‌ನ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ತಮ್ಮ ‘ಬ್ರಹ್ಮಾಸ್ತ್ರ’ ಪ್ರಯೋಗಿಸಿದ್ದಾರೆ.

ಡಿಕೆಶಿ ಸಿಎಂ ಆಗಬೇಕು ಎಂಬ ಕೂಗಿಗೆ ಪ್ರತಿಕ್ರಿಯಿಸಿದ ಸಿಎಂ, “ಏನ್ ಹೈಕಮಾಂಡ್ ಹೇಳಿದ್ಯಾ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.

ನವೆಂಬರ್ 15ರ ಬಳಿಕ ಮಹತ್ವದ ಸಂದೇಶ: ನವೆಂಬರ್ 15ರ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಾಗಿ ಮತ್ತು ಸಚಿವ ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಬಳಿ ಅನುಮತಿ ಕೇಳುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಂಪುಟ ಪುನಾರಚನೆಯ ಗುನ್ನಾ: ‘ಅಧಿಕಾರ ಹಂಚಿಕೆ’ ಮಾತಿಗೆ ಪ್ರತಿಯಾಗಿ, ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಅಸ್ತ್ರ ಬಳಸಿದ್ದಾರೆ ಎನ್ನಲಾಗಿದೆ. 15ಕ್ಕೂ ಹೆಚ್ಚು ಸಚಿವರನ್ನು ಸಂಪುಟದಿಂದ ಕೈಬಿಡುವ ಪಟ್ಟಿ ಸಿದ್ಧವಾಗುತ್ತಿದ್ದು, ಇದು ಜಾತಿವಾರು ಸಮತೋಲನ ಆಧರಿಸಿದ ‘ಹೊಸ ಆಟ’ಕ್ಕೆ ನಾಂದಿ ಹಾಡಲಿದೆ.

ಸದ್ಯಕ್ಕೆ, ಮುಖ್ಯಮಂತ್ರಿ ಸ್ಥಾನದ ಚರ್ಚೆಯ ಚೆಂಡು ಸಂಪೂರ್ಣವಾಗಿ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

error: Content is protected !!