Sunday, October 26, 2025

‘ಪಕ್ಷ ಹೇಳಿದರೆ ತ್ಯಾಗಕ್ಕೆ ಸಿದ್ಧ’: ಕೃಷ್ಣ ಭೈರೇಗೌಡರ ಹೇಳಿಕೆ ಹಿಂದೆ ಅಡಗಿದ ಸಂದೇಶವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಮತ್ತು ಸಂಪುಟ ಪುನಾರಚನೆಯ ಬಿಸಿ ಚರ್ಚೆ ನಡೆಯುತ್ತಿರುವ ಮಧ್ಯೆಯೇ, ಕಂದಾಯ ಸಚಿವ ಕೃಷ್ಣ ಭೈರೇಗೌಡರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಅರ್ಹತೆಗೂ ಮೀರಿ ಅವಕಾಶಗಳನ್ನು ಕಲ್ಪಿಸಿದೆ. ನನ್ನನ್ನು ಗುರುತಿಸಿ ಇಷ್ಟೊಂದು ದೊಡ್ಡ ಜವಾಬ್ದಾರಿ ಕೊಟ್ಟಿದ್ದಕ್ಕಾಗಿ ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ. ಪಕ್ಷ ಬಯಸಿದರೆ, ನಾನು ಯಾವುದೇ ಕ್ಷಣದಲ್ಲೂ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ,” ಎಂದು ಘೋಷಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌ನ ಆಂತರಿಕ ಬದಲಾವಣೆಗಳ ಕುರಿತು ಊಹಾಪೋಹಗಳು ಹೆಚ್ಚಿರುವ ಸಂದರ್ಭದಲ್ಲಿ ಕೃಷ್ಣ ಭೈರೇಗೌಡರ ಈ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು, ಇದು ಸಂಪುಟ ಪುನಾರಚನೆ ಕುರಿತು ಚರ್ಚಿಸಲು ನಡೆಸಿದ ಸಭೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ, ಸಿಎಂ ಮತ್ತು ಕಾಂಗ್ರೆಸ್ ನಾಯಕರು ಈ ಚರ್ಚೆಯನ್ನು ನಿರಾಕರಿಸಿದ್ದರು.

ಹಾಸನಾಂಬ ದೇವಿಯ ದರ್ಶನ ಮಾಹಿತಿ

ಇದೇ ಸಂದರ್ಭದಲ್ಲಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷ್ಣ ಭೈರೇಗೌಡರು, ಹಾಸನಾಂಬ ದೇವಿಯ ದರ್ಶನದ ಬಗ್ಗೆ ಮಾಹಿತಿ ನೀಡಿದರು. “ಈ ಬಾರಿ ಒಟ್ಟು 26 ಲಕ್ಷ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ದೇವಿಯು ಹಸನ್ಮುಖಿ ಮತ್ತು ಪ್ರಸನ್ನತೆಯ ಸಂಕೇತವಾಗಿದ್ದು, ದರ್ಶನ ಪಡೆದ ಭಕ್ತರು ಸಂತೋಷದಿಂದ ಹಿಂದಿರುಗಿದ್ದಾರೆ,” ಎಂದು ಅವರು ತಿಳಿಸಿದರು.

ಈ 26 ಲಕ್ಷ ಭಕ್ತರಲ್ಲಿ ಶೇ. 60ರಷ್ಟು ಮಹಿಳೆಯರು ಇರುವುದು ವಿಶೇಷ. ಸರ್ಕಾರವು ಜಾರಿಗೊಳಿಸಿದ ‘ಶಕ್ತಿ’ ಯೋಜನೆಯಿಂದಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲು ಸಾಧ್ಯವಾಯಿತು ಎಂದು ಅವರು ವಿವರಿಸಿದರು. “ದೇವರು ಯಾರ ಮನೆಯ ಸ್ವತ್ತು ಕೂಡ ಅಲ್ಲ. ಸಾಮಾನ್ಯರಿಗೂ ದೇವಿಯ ದರ್ಶನ ದೊರೆಯುವಂತೆ ನಾವು ವ್ಯವಸ್ಥೆ ಮಾಡಿದ್ದೇವೆ,” ಎಂದು ಕೃಷ್ಣ ಭೈರೇಗೌಡರು ಹೇಳಿದರು.

error: Content is protected !!