ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳದಲ್ಲಿ ಮುಂದಿನ ಬಾರಿ ಟಿಎಂಸಿಯನ್ನು ಅಧಿಕಾರದಿಂದ ತೆಗೆದುಹಾಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇಂದು ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರವು ರಾಜ್ಯ ಸರ್ಕಾರಕ್ಕೆ ಕಳುಹಿಸುವ ಹಣವನ್ನು ಟಿಎಂಸಿ ಸರ್ಕಾರ ಮಹಿಳೆಯರು ಮತ್ತು ಬಡವರ ಕಲ್ಯಾಣಕ್ಕಾಗಿ ಬಳಸುತ್ತಿಲ್ಲ. ಅದರ ಬದಲಾಗಿ ಆ ಹಣವನ್ನು ಟಿಎಂಸಿ ಕೇಡರ್‌ಗೆ ಖರ್ಚು ಮಾಡಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದೆ. ಆದರೆ ಬಂಗಾಳದ ಅಭಿವೃದ್ಧಿಯು ರಾಜ್ಯ ಸರ್ಕಾರದಿಂದ ಭಾರಿ ಸವಾಲುಗಳನ್ನು ಎದುರಿಸುತ್ತಿದೆ. ಏಕೆಂದರೆ ಕಲ್ಯಾಣ ಯೋಜನೆಗಳಿಗೆ ಬಿಡುಗಡೆಯಾದ ಹಣವನ್ನು ಟಿಎಂಸಿ ಲೂಟಿ ಮಾಡಿ ಪಕ್ಷದ ಕೇಡರ್‌ಗೆ ಖರ್ಚು ಮಾಡುತ್ತಿದೆ ಎಂದಿದ್ದಾರೆ.
ಅಪರಾಧ ಮತ್ತು ಭ್ರಷ್ಟಾಚಾರ ಟಿಎಂಸಿ ಸರ್ಕಾರದ ಗುರುತಾಗಿದೆ. ರಾಜ್ಯದಲ್ಲಿ ಟಿಎಂಸಿ ಅಧಿಕಾರದಲ್ಲಿರುವವರೆಗೂ ಯಾವುದೇ ಅಭಿವೃದ್ಧಿ ಇರುವುದಿಲ್ಲ. ಟಿಎಂಸಿಯನ್ನು ಅಧಿಕಾರದಿಂದ ತೆಗೆದುಹಾಕಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಅಪರಾಧಿಗಳು ಮತ್ತು ಭ್ರಷ್ಟರು ಜೈಲಿನಲ್ಲಿರಬೇಕೇ ಹೊರತು ಅಧಿಕಾರದಲ್ಲಿರಬಾರದು ಎಂದು ಮೋದಿ ಕಿಡಿ ಕಾರಿದ್ದಾರೆ.