Saturday, November 15, 2025

ಬಿಗ್ ಬಾಸ್ ಖ್ಯಾತಿಯ ನಟಿಗೆ ಲೈಂಗಿಕ ಕಿರುಕುಳ: ರಿಯಲ್ ಎಸ್ಟೇಟ್ ಉದ್ಯಮಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಟೆಲಿವಿಷನ್ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ ವೆಂಕಟೇಶ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

2021ರಲ್ಲಿ ನಟಿಗೆ ಪರಿಚಯವಾಗಿದ್ದ ಆರೋಪಿಯು ಕಳೆದ ಕೆಲವು ದಿನಗಳಿಂದ ಅಸಭ್ಯ ವರ್ತನೆ ಮತ್ತು ಕಿರುಕುಳ ನೀಡುತ್ತಿದ್ದಾನೆಂಬ ಆರೋಪಿ ನಟಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಐದು ದಿನಗಳ ಹಿಂದೆ ಗೋವಿಂದರಾಜನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಆರೋಪಿ ಬಂಧನದ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿತ್ತು.

ಪೊಲೀಸರ ಲುಕ್‌ಔಟ್ ನೋಟಿಸ್ ಮಧ್ಯೆ, ಅರವಿಂದ ರೆಡ್ಡಿ ಶ್ರೀಲಂಕಾಗೆ ತೆರಳಲು ಯತ್ನಿಸುತ್ತಿದ್ದಾಗ, ಇಂದು ಬೆಳ್ಳಂಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ನಂತರ ಅವರನ್ನು ಪೊಲೀಸರು ವಿಚಾರಣೆಗೆ ತಂದು ಕೇಸ್‌ ದಾಖಲೆಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಿದ್ದಾರೆ.

ಬಂಧಿತ ಅರವಿಂದ ರೆಡ್ಡಿ ಎವಿಆರ್ ಗ್ರೂಪ್ ಮಾಲೀಕರಾಗಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದೊಂದಿಗೆ ಕನ್ನಡ ಚಿತ್ರರಂಗದಲ್ಲೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕರೂ ಆಗಿರುವ ಅವರು, ಮನರಂಜನಾ ಕ್ಷೇತ್ರದ ಹಲವಾರು ಕಲಾವಿದರೊಂದಿಗೆ ಆಪ್ತ ಸಂಬಂಧ ಹೊಂದಿದ್ದರು.

ಚಲನಚಿತ್ರ ಕಲಾವಿದರಿಗಾಗಿ ಕ್ರಿಕೆಟ್ ಟೂರ್ನಮೆಂಟ್‌ಗಳನ್ನು ಆಯೋಜಿಸುವಲ್ಲಿ ಕೂಡ ಸಕ್ರಿಯರಾಗಿದ್ದ ಅವರು, ಈಗ ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದಾರೆ. ವಿಚಾರಣೆ ಮುಂದುವರಿದಿದ್ದು, ಪ್ರಕರಣದ ಇನ್ನಷ್ಟು ವಿವರಗಳು ಹೊರಬರಬೇಕಿದೆ.

error: Content is protected !!