Tuesday, December 2, 2025

ವೇದ ಪರಂಪರೆಯ ಅತ್ಯಂತ ಕಠಿಣ ‘ದಂಡಕ್ರಮ ಪಾರಾಯಣ’ ಪಠಣೆ: 19 ವರ್ಷದ ಯುವಕನ ಸಾಧನೆ ಹಾಡಿಹೊಗಳಿದ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವೇದ ಪರಂಪರೆಯಲ್ಲಿಯೇ ಅತ್ಯಂತ ಕಠಿಣವಾದ ‘ದಂಡಕ್ರಮ ಪಾರಾಯಣ’ವನ್ನು 19 ವರ್ಷದ ವೇದಮೂರ್ತಿ ಮಹೇಶ್ ಎಂಬ ಯುವಕ ಪಠಿಸಿದ್ದು, ಈ ಮೂಲಕ ಅಸಾಮಾನ್ಯ ಸಾಧನೆಗೈದ ಆತನನ್ನು ಪ್ರಧಾನಿ ಮೋದಿ ಹಾಡಿಹೊಗಳಿದ್ದಾರೆ.

ಬರೋಬ್ಬರಿ 2000 ಮಂತ್ರಗಳನ್ನು ಒಳಗೊಂಡ ದಂಡಕ್ರಮ ಪಾರಾಯಣವನ್ನು ಯಾವುದೇ ತಪ್ಪಿಲ್ಲದೇ ಕೇವಲ 50 ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾನೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಪೋಸ್ಟ್​ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಧಾನಿ ಮೋದಿ ಪೋಸ್ಟ್ ವೈರಲ್​:
ಪ್ರಧಾನಿ ಮೋದಿ 19 ವರ್ಷದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಸಾಧಿಸಿದ್ದು ಮುಂದಿನ ಪೀಳಿಗೆಗೆ ಸ್ಮರಣೀಯ. ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2,000 ಮಂತ್ರಗಳ ಪಠಣವಾದ ದಂಡಕ್ರಮ ಪಾರಾಯಣವನ್ನು 50 ದಿನಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿದ್ದಕ್ಕಾಗಿ ಈತನ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಪ್ರಶಂಸಿಸಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ, ಶ್ರೀಕ್ಷೇತ್ರ ಕಾಶಿಯಲ್ಲಿ ಹಲವು ಗಣ್ಯರು ಮತ್ತು ವಿದ್ವಾಂಸರ ಸಮ್ಮುಖದಲ್ಲಿ ವೇದಮೂರ್ತಿ ದೇವವ್ರತ ರೇಖೆಗೆ ‘ದಂಡಕ್ರಮ ವಿಕ್ರಮಾದಿತ್ಯ’ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಯಾರು?
ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಮಹಾರಾಷ್ಟ್ರದ ಅಹಲ್ಯಾ ನಗರದ ನಿವಾಸಿ. ಇವರ ತಂದೆ ವೇದಮೂರ್ತಿ ಬ್ರಹ್ಮಶ್ರೀ ಮಹೇಶ ಚಂದ್ರಕಾಂತ ರೇಖೆ. ವೇದಮೂರ್ತಿ ಮಹೇಶ್ ರೇಖೆ ವಾರಣಾಸಿಯ ಸಾಂಗ್ವೇದ ವಿದ್ಯಾಲಯದ ವಿದ್ಯಾರ್ಥಿ. ದಂಡಕ್ರಮ ಪಾರಾಯಣವನ್ನು ಅತ್ಯಂತ ಕಠಿಣ ಎಂದು ಪರಿಗಣಿಸಲಾಗಿದ್ದರೂ ಕೂಡ ಈತ ಇದಕ್ಕಾಗಿ ನಿಯಮಿತವಾಗಿ ಅಭ್ಯಾಸ ಮಾಡಿದ್ದನು. ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಂಡಾಕ್ರಮ ಪಾರಾಯಣ ನಡೆಸುತ್ತಿದ್ದ ಎಂದು ಆತನ ಪರಿಚಿತರು ತಿಳಿಸಿದ್ದಾರೆ.

ಇಲ್ಲಿಯವರೆಗೆ, ದಂಡಕ್ರಮ ಪಾರಾಯಣವನ್ನು ಪ್ರಪಂಚದಲ್ಲಿ ಎರಡು ಬಾರಿ ಮಾತ್ರ ನಡೆಸಲಾಗಿದೆ. 200 ವರ್ಷಗಳ ಹಿಂದೆ ವೇದಮೂರ್ತಿ ನಾರಾಯಣ ಶಾಸ್ತ್ರಿ ದೇವ್ ಅವರು ನಾಸಿಕ್‌ನಲ್ಲಿ ದಂಡಕ್ರಮ ಪಾರಾಯಣವನ್ನು ನಡೆಸಿದ್ದರು. ಇದಾದ ಬಳಿಕ ಇದೀಗ ಈ 19 ವರ್ಷದ ಯುವಕ ಕಾಶಿಯಲ್ಲಿ ದಂಡಾಕ್ರಮ ಪಾರಾಯಣ ಮಾಡಿರುವುದು. ವೇದಮೂರ್ತಿ ಅಕ್ಟೋಬರ್ 2 ರಿಂದ ನವೆಂಬರ್ 30 ರವರೆಗೆ ದಂಡಕ್ರಮ ಪಾರಾಯಣವನ್ನು ಕಾಶಿಯ ರಾಮಘಟ್ಟದ ​​ವಲ್ಲಭರಾಮ್ ಶಾಲಿಗ್ರಾಮ ಸಂಗ್ವೇದ ವಿದ್ಯಾಲಯದಲ್ಲಿ ನಡೆಸಿಕೊಟ್ಟಿದ್ದು, ಕಳೆದ ಶನಿವಾರ ದಂಡಕ್ರಮ ಪಾರಾಯಣ ಪೂರ್ಣಗೊಂಡಿದೆ.

ದಂಡಕ್ರಮ ಪಾರಾಯಣ ಎಂದರೇನು?
ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ ಸರಿಸುಮಾರು 2,000 ಮಂತ್ರಗಳನ್ನು ದಂಡಕ್ರಮ ಪಾರಾಯಣ ಎಂದು ಕರೆಯಲಾಗುತ್ತದೆ. ಇದು ಈ ಎಲ್ಲಾ ಮಂತ್ರಗಳನ್ನು ಕಂಠಪಾಠ ಮಾಡುವ ಮತ್ತು ಪಠಿಸುವ ಅಗತ್ಯವಿರುವ ಕಠಿಣ ಪರೀಕ್ಷೆಯಾಗಿದೆ. ಶೃಂಗೇರಿ ಮಠದ ಪ್ರಕಾರ, ದಂಡಕ್ರಮವು ಅದರ ಸಂಕೀರ್ಣ ಸ್ವರ ಮಾದರಿಗಳು ಮತ್ತು ಸಾಕಷ್ಟು ಕಷ್ಟಕರವಾಗಿದ್ದರಿಂದ ವೈದಿಕ ಪಠಣದ ಕಿರೀಟ ರತ್ನವೆಂದು ಪರಿಗಣಿಸಲಾಗಿದೆ.

error: Content is protected !!