ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಉದ್ದೇಶದಿಂದ ಆರಂಭವಾದ ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಪ್ರಯಾಣಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಸೇವೆ ಆರಂಭವಾಗಿ ಇನ್ನೂ ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಈ ಅರೆ ಹೈಸ್ಪೀಡ್ ರೈಲು ಜನಪ್ರಿಯತೆಯ ಹೊಸ ಮಾನದಂಡ ಸ್ಥಾಪಿಸಿದೆ.
ನವೆಂಬರ್ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಈ ಪ್ರೀಮಿಯಂ ರೈಲು, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಮೊದಲ ಅಂತಾರಾಜ್ಯ ವಂದೇ ಭಾರತ್ ಸೇವೆಯಾಗಿದ್ದು, ಆರಂಭದ ದಿನಗಳಿಂದಲೇ ಪ್ರಯಾಣಿಕರ ಗಮನ ಸೆಳೆದಿದೆ.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ನೀಡಿರುವ ಅಂಕಿಅಂಶಗಳ ಪ್ರಕಾರ, ಇದುವರೆಗೆ 55 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಎರಡೂ ಮಾರ್ಗಗಳಲ್ಲಿ ಟಿಕೆಟ್ ಬುಕಿಂಗ್ ಪ್ರಮಾಣ ಶೇ.100ವನ್ನು ಮೀರಿದ್ದು, ಕೆಲ ದಿನಗಳಲ್ಲಿ ಆಕ್ಯುಪೆನ್ಸಿ ಶೇ.140ಕ್ಕೂ ತಲುಪಿದೆ.
ಬೆಂಗಳೂರು–ಎರ್ನಾಕುಲಂ ಮಾರ್ಗದಲ್ಲಿ ನವೆಂಬರ್ ತಿಂಗಳಲ್ಲಿ ಸರಾಸರಿ ಶೇ.127ರಷ್ಟು ಬುಕಿಂಗ್ ದಾಖಲಾಗಿದ್ದು, ಡಿಸೆಂಬರ್‌ನಲ್ಲೂ ಈ ಪ್ರಮಾಣ ಶೇ.117ರಷ್ಟಿದೆ. ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಶಬರಿಮಲೆ ಯಾತ್ರೆಯ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಟಿಕೆಟ್ ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

