ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಪೊಲೀಸರು ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಅಕ್ರಮವಾಗಿ ಅಮೂಲ್ಯವಾದ ರಕ್ತ ಚಂದನ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಓರ್ವ ಅಪ್ರಾಪ್ತ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸರಿಸುಮಾರು 1,800 ಕೆಜಿ ತೂಕದ ರಕ್ತ ಚಂದನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 1.75 ಕೋಟಿ ಎಂದು ಅಂದಾಜಿಸಲಾಗಿದೆ.
ಹುಳಿಮಾವು ಮತ್ತು ಆರ್.ಟಿ. ನಗರ ಠಾಣೆ ಪೊಲೀಸರು ಪಡೆದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆಗಳನ್ನು ನಡೆಸಿದರು. ಬಂಧಿತ ಆರೋಪಿಗಳು ಆಂಧ್ರ ಮೂಲದವರಾಗಿದ್ದು, ಡಿಗ್ರಿ ಮುಗಿಸಿದ್ದರೂ ಉದ್ಯೋಗವಿಲ್ಲದೆ ಹಣ ಗಳಿಸುವ ದುರಾಸೆಯಿಂದ ಕಳ್ಳ ಮಾರ್ಗ ಹಿಡಿದಿದ್ದರು. ಇವರು ಆಂಧ್ರದ ಮದನಪಲ್ಲಿಯ ಸುಂಡೆಪಲ್ಲಿ ಭಾಗದಿಂದ ರಕ್ತ ಚಂದನ ಕಳವು ಮಾಡಿ, ಅದನ್ನು ಬೆಂಗಳೂರು ಮಾರ್ಗವಾಗಿ ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಮೊದಲ ಕಾರ್ಯಾಚರಣೆಯನ್ನು ಹುಳಿಮಾವು ಠಾಣೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ತಂಡ ನಡೆಸಿತು. ಮೂರು ವಿಭಿನ್ನ ಕಾರುಗಳಲ್ಲಿ ರೆಡ್ ಸ್ಯಾಂಡಲ್ ತುಂಡುಗಳನ್ನು ತುಂಬಿಕೊಂಡು ಬಂದಿದ್ದ ಸ್ಮಗ್ಲರ್‌ಗಳು, ಪೊಲೀಸರ ಗಮನವನ್ನು ಬೇರೆಡೆ ಸೆಳೆಯಲು ಮುಖ್ಯ ರಸ್ತೆ ಬಿಟ್ಟು ನೆಲಮಂಗಲ-ನೈಸ್ ರೋಡ್ ಮಾರ್ಗವಾಗಿ ಹೊಸೂರು ಮೂಲಕ ತಮಿಳುನಾಡಿಗೆ ತೆರಳಲು ಪ್ರಯತ್ನಿಸಿದ್ದರು.
ಪೊಲೀಸರು ನಡೆಸಿದ ದಾಳಿಯಲ್ಲಿ, ಬರೋಬ್ಬರಿ 1,100 ಕೆಜಿ ತೂಕದ, 1 ಕೋಟಿ ಮೌಲ್ಯದ ರಕ್ತ ಚಂದನವನ್ನು ಜಪ್ತಿ ಮಾಡಲಾಯಿತು. ಈ ವೇಳೆ ಓರ್ವ ಅಪ್ರಾಪ್ತ ಹಾಗೂ ಅಹ್ಮದ್ ಪಾಷಾ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೋರ್ವ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇನ್ನೊಂದು ಪ್ರಕರಣದಲ್ಲಿ, ಆರ್.ಟಿ. ನಗರ ಪೊಲೀಸರು ರಾಜಶೇಖರ್ ಮತ್ತು ವರಪ್ರಸಾದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೊಲೆರೋ ವಾಹನದಲ್ಲಿ ರಕ್ತ ಚಂದನವನ್ನು ಆಂಧ್ರದಿಂದ ಬೆಂಗಳೂರಿಗೆ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದರು. ಆರೋಪಿಗಳು ಗೃಹೋಪಯೋಗಿ ವಸ್ತುಗಳಂತೆ ರಕ್ತ ಚಂದನವನ್ನು ಕತ್ತರಿಸಿ ವಾಹನದಲ್ಲಿಟ್ಟು, ಅದರ ಮೇಲೆ ತರಕಾರಿ ಮೂಟೆಗಳನ್ನು ಹಾಕಿ ಪೊಲೀಸರಿಗೆ ಅನುಮಾನ ಬಾರದಂತೆ ಸಾಗಾಟ ನಡೆಸುತ್ತಿದ್ದರು. ಈ ದಾಳಿಯಲ್ಲಿ 754 ಕೆಜಿ ತೂಕದ, 75 ಲಕ್ಷ ಮೌಲ್ಯದ ರೆಡ್ ಸ್ಯಾಂಡಲ್ ವಶಪಡಿಸಿಕೊಳ್ಳಲಾಗಿದೆ.
ಈ ಜಾಲದ ಪ್ರಮುಖ ಸೂತ್ರಧಾರರು ಯಾರು? ತಮಿಳುನಾಡಿನಲ್ಲಿ ಇವರಿಗೆ ಸಂಪರ್ಕ ಒದಗಿಸುತ್ತಿದ್ದವರು ಯಾರು? ಎಂಬ ಬಗ್ಗೆ ಪೊಲೀಸರು ಮತ್ತಷ್ಟು ಆಳವಾದ ತನಿಖೆ ನಡೆಸಲಿದ್ದಾರೆ.

