ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ 2025-26ನೇ ಸಾಲಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಅಕ್ಟೋಬರ್ ನಿಂದ ಡಿಸೆಂಬರ್ ಆರ್ಥಿಕ ಫಲಿತಾಂಶವನ್ನು ಶುಕ್ರವಾರ (ಜನವರಿ 16) ಪ್ರಕಟಿಸಲಾಗಿದೆ. ಕಂಪನಿಯ ಏಕೀಕೃತ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 10ರಷ್ಟು ಏರಿಕೆ ಕಂಡು, 2.94 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಪ್ರಮಾಣದಲ್ಲಿ ಆದಾಯ ಬರುವುದಕ್ಕೆ ಮುಖ್ಯ ಕಾರಣ ಆಗಿದ್ದು ಡಿಜಿಟಲ್ ಸೇವೆಗಳು, ತೈಲದಿಂದ ರಾಸಾಯನಿಕ (ಒ ಟು ಸಿ) ಹಾಗೂ ರೀಟೇಲ್ ವ್ಯವಹಾರದಲ್ಲಿನ ಬೆಳವಣಿಗೆ. ಇನ್ನು ನಿವ್ವಳ ಲಾಭವು (ಪ್ರಿ ಮೈನಾರಿಟಿ) ಈ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 1.6ರಷ್ಟು ಹೆಚ್ಚಳವಾಗಿ 22,290 ಕೋಟಿ ರೂಪಾಯಿಗೆ ತಲುಪಿದೆ. ತೆರಿಗೆ ಮುಂಚಿನ ಲಾಭವು ಶೇಕಡಾ 3.7ರಷ್ಟು ಹೆಚ್ಚಳವಾಗಿ 29,697 ಕೋಟಿ ರೂಪಾಯಿ ಬಂದಿದೆ.
ಏಕೀಕೃತವಾದ ಇಬಿಐಟಿಡಿಎ ಶೇಕಡಾ 6.1ರಷ್ಟು ಹೆಚ್ಚಳವಾಗಿ 50,932 ಕೋಟಿ ರೂಪಾಯಿ ಬಂದಿದೆ. ಇದಕ್ಕೆ ಬೆಂಬಲ ಆಗಿರುವುದು ಡಿಜಿಟಲ್ ಸೇವೆಗಳು ಹಾಗೂ ತೈಲದಿಂದ ರಾಸಾಯನಿಕದ ತನಕ ಸೆಗ್ಮೆಂಟ್ ಗಳಲ್ಲಿ ಆಗಿರುವಂಥ ಗಳಿಕೆಯ ಬೆಳವಣಿಗೆ ಈ ಕಾರಣದಿಂದಾಗಿ ತೈಲ ಹಾಗೂ ಅನಿಲ ವ್ಯವಹಾರದಲ್ಲಿನ ದುರ್ಬಲತೆಯನ್ನು ಸರಿದೂಗಿಸಲು ಸಹಾಯ ಮಾಡಿದೆ.
“ರಿಲಯನ್ಸ್ ಇಂಡಸ್ಟ್ರೀಸ್ ನ ಎಲ್ಲ ವ್ಯವಹಾರಗಳಲ್ಲಿನ ಹಣಕಾಸು ಡೆಲಿವರಿ ಮತ್ತು ಕಾರ್ಯ ಚಟುವಟಿಕೆ ಸ್ಥಿತಿಸ್ಥಾಪಕತ್ವವನ್ನು ಮೂರನೇ ತ್ರೈಮಾಸಿಕದ ಒಟ್ಟಾರೆ ಪ್ರದರ್ಶನವು ಪ್ರತಿಫಲಿಸುತ್ತಿದೆ,” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಹೇಳಿದ್ದಾರೆ.
ತೈಲದಿಂದ ರಾಸಾಯನಿಕ :
ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಇಬಿಐಟಿಡಿಎ ಶೇಕಡಾ 15ರಷ್ಟು ಹೆಚ್ಚಳವಾಗಿ 16,507 ಕೋಟಿ ರೂಪಾಯಿ ಆಗಿದೆ. ಅದಕ್ಕೆ ಹೆಚ್ಚಿನ ಪರಿಮಾಣ ಹಾಗೂ ನಿರಂತರವಾದ ಇಂಧನ ರೀಟೇಲ್ ಕಾರ್ಯಚಟುವಟಿಕೆ ಸಹಾಯ ಮಾಡಿದೆ. ಡಿಸೆಂಬರ್ ಕೊನೆ ಹೊತ್ತಿಗೆ ಜಿಯೋ- ಬಿಪಿ 2,125 ಔಟ್ ಲೆಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇಕಡಾ 14ರಷ್ಟು ಏರಿಕೆ ಆಗಿದೆ. “ಜಿಯೋ- ಬಿಪಿ ಜಾಲದ ನಿರಂತರ ವಿಸ್ತರಣೆಯಿಂದಾಗಿ ಇಂಧನ ರೀಟೇಲ್ ವ್ಯವಹಾರದಲ್ಲಿ ಬಲವಾದ ಬೆಳವಣಿಗೆ ಇದರ ಬಗ್ಗೆ ಗಮನ ಸೆಳೆಯಲು ಸಂತೋಷವಾಗುತ್ತಿದೆ,” ಎಂದು ಮುಕೇಶ್ ಹೇಳಿದರು.
ಡಿಜಿಟಲ್ ವ್ಯವಹಾರ :
ಡಿಜಿಟಲ್ ಸೇವೆಗಳ ವ್ಯವಹಾರ ಕೂಡ ಬಲವಾದ ಬೆಳವಣಿಗೆ ದಾಖಲಿಸಿದೆ. ಆದಾಯವು ಶೇ 12.7ರಷ್ಟು ಏರಿಕೆಯಾಗಿ 43,683 ಕೋಟಿ ರೂಪಾಯಿ ಬಂದಿದೆ. ವರ್ಷದಿಂದ ವರ್ಷಕ್ಕೆ ಇಬಿಐಟಿಡಿಎ ಶೇ 16.4ರಷ್ಟು ಹೆಚ್ಚಳವಾಗಿ 19,303 ಕೋಟಿ ಮುಟ್ಟಿದೆ. ಇದಕ್ಕೆ ಸಹಾಯ ಮಾಡಿರುವುದು ವೇಗ ಪಡೆದುಕೊಂಡ ಚಂದಾದಾರರ ಸೇರ್ಪಡೆ ಸಂಖ್ಯೆ ಮತ್ತು 170 ಬೇಸಿಸ್ ಪಾಯಿಂಟ್ ಗಳಷ್ಟು ಮಾರ್ಜಿನ್ ವಿಸ್ತರಣೆ ಆಗಿರುವುದು.
ಜಿಯೋದ ಚಂದಾದಾರರ ಸಂಖ್ಯೆ 51.53 ಕೋಟಿಗೆ ಹೆಚ್ಚಳವಾಗಿದೆ. 5ಜಿ ಬಳಕೆದಾರರ ಬೆಲೆ 25 ಕೋಟಿ ಈ ತ್ರೈಮಾಸಿಕ ದಾಟಿದೆ. ಒಟ್ಟಾರೆ ಮನೆ ಸಂಪರ್ಕಗಳು 2.5 ಕೋಟಿ ದಾಟಿದೆ. ಇನ್ನು ಜಿಯೋಏರ್ ಫೈಬರ್ ಈಗ ಮೊದಲ ಸ್ಥಿರ ನಿಸ್ತಂತು ಸಂಪರ್ಕದಲ್ಲಿ ಜಾಗತಿಕವಾಗಿ 1 ಕೋಟಿ ಸಂಖ್ಯೆಯನ್ನು ದಾಟಿದ ಮೊದಲ ಸಾಧನೆ ಮಾಡಿದೆ. ಈ ತ್ರೈಮಾಸಿಕ ಕೊನೆಗೆ ಸಂಖ್ಯೆಯು 1.15 ಕೋಟಿ ಇತ್ತು. ಬಳಕೆದಾರರಿಂದ ಬರುವ ಸರಾಸರಿ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 5.1ರಷ್ಟು ಏರಿಕೆಯಾಗಿ 213.7 ರೂಪಾಯಿ ಆಗಿದೆ. “ಈ ತ್ರೈಮಾಸಿಕದಲ್ಲಿ ಜಿಯೋ ತನ್ನ ಚಂದಾದಾರರ ನೆಲೆಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಗೆ ಸಮಗ್ರವಾದ, ದೇಶೀಯವಾಗಿ ಸೂಕ್ತವಾಗುವುದನ್ನು ನೀಡುವ ಮೂಲಕ ಈ ವ್ಯವಹಾರವು ಇಬಿಐಟಿಡಿಎದಲ್ಲಿ ಶೇ 16.4ರಷ್ಟು ಬೆಳವಣಿಗೆ ತೋರಿಸಿದೆ,” ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ತೈಲ- ಅನಿಲ ವ್ಯವಹಾರ :
ನಿಯಮಿತ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯ ನಿರ್ವಹಣೆ ವೆಚ್ಚದಿಂದಾ ತೈಲ ಮತ್ತು ಅನಿಲ ವ್ಯವಹಾರದಲ್ಲಿ ಸ್ವಲ್ಪ ದುರ್ಬಲತೆ ಕಂಡಿದೆ. ಇಬಿಐಟಿಡಿಎ ವರ್ಷದ ಹಿಂದಿನ ಇದೇ ಅವಧಿಗಿಂತ ಶೇಕಡಾ 13ರಷ್ಟು ಇಳಿಕೆಯಾಗಿ 4,857 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಈ ಸೆಗ್ಮೆಂಟ್ ನಿಂದ ಬರುವಂಥ ಆದಾಯವು ಶೇಕಡಾ 8.4ರಷ್ಟು ಇಳಿಕೆಯಾಗಿ 5,833 ಕೋಟಿ ರೂಪಾಯಿ ಆಗಿದೆ.
ರೀಟೇಲ್ ವ್ಯವಹಾರ:
ರೀಟೇಲ್ ವ್ಯವಹಾರದ ಮೂಲಕ 97,605 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8.1ರಷ್ಟು ಹೆಚ್ಚಳವಾಗಿದೆ. ಹಬ್ಬದ ಬೇಡಿ, ಆರ್ ಸಿಪಿಎಲ್ ಡಿಮರ್ಜರ್, ಜಿಎಸ್ ಟಿಯಲ್ಲಿನ ಇಳಿಕೆ ಇವೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ. ಇದೆಲ್ಲದರ ಹೊರತಾಗಿಗೂ ಇಬಿಐಟಿಡಿಎ 6,915 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ರಿಲಯನ್ಸ್ ರೀಟೇಲ್ 19,979 ಮಳಿಗೆಗಳನ್ನು ನಿರ್ವಹಿಸುತ್ತಿದೆ. ಅದರ ಒಟ್ಟಾರೆ ಕಾರ್ಯಚಟುವಟಿಕೆ ಪ್ರದೇಶ 7.81 ಕೋಟಿ ಚದರಡಿಗೆ ತಲುಪಿದೆ. ಹೈಪರ್- ಲೋಕಲ್ ಡೆಲಿವರಿಯಲ್ಲಿ ದೈನಂದಿನ ಸರಾಸರಿ ವ್ಯವಹಾರ ಐದು ಪಟ್ಟು ಏರಿಕೆ ಕಂಡಿದೆ.
“ಹೊಸ ಬ್ರ್ಯಾಂಡ್ ಗಳ ಸೇರ್ಪಡೆ ಹಾಗೂ ಉತ್ಪನ್ನಗಳ ಶ್ರೇಣಿಗಳು ಇವೆಲ್ಲದರಿಂದ ಕಳೆದ ತ್ರೈಮಾಸಿಕದಲ್ಲಿ ನಮ್ಮ ರೀಟೇಲ್ ವ್ಯವಹಾರ ಅತ್ಯುತ್ತಮ ಅವಧಿಯನ್ನು ಕಂಡಿದೆ. ಈ ತ್ರೈಮಾಸಿಕದಲ್ಲಿ ನಮ್ಮ ಗ್ರಾಹಕ ಉತ್ಪನ್ನಗಳ ವ್ಯವಹಾರದ ಡಿಮರ್ಜರ್ ಆಯಿತು. ವೇಗವಾದ ಹಾದಿಯಲ್ಲಿ ಗ್ರಾಹಕ ಉತ್ಪನ್ನಗಳು ಸಾಗುತ್ತಿದೆ. ಅದರ ಜೊತೆಗೆ ಸಂಘಟಿತ ಸ್ವರೂಪದಲ್ಲಿ ದೃಷ್ಟಿ ನೆಡಲಾಗಿದೆ,” ಎಂದು ಅಂಬಾನಿ ಹೇಳಿದರು.
ಜಿಯೋಸ್ಟಾರ್
ಜಿಯೋಸ್ಟಾರ್ ಬಲವಾದ ಕಾರ್ಯನಿರ್ವಹಣೆ ಪ್ರದರ್ಶನವನ್ನು ನೀಡಿದೆ. ಜಿಯೋಸ್ಟಾರ್ 8010 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿದೆ. ಅದರಲ್ಲಿ ಇಬಿಐಟಿಡಿಎ ಇತರ ಆದಾಯವಾದ 1303 ಕೋಟಿ ರೂಪಾಯಿ ಒಳಗೊಂಡಿದೆ. ಟಿವಿ ನೆಟ್ ವರ್ಕ್ 83 ಕೋಟಿ ವೀಕ್ಷಕರನ್ನು ತಲುಪಿದ್ದು, ಒಟ್ಟಾರೆ 6 ಸಾವಿರ ಕೋಟಿ ಗಂಟೆಗಳ ವೀಕ್ಷಣೆ ಅವಧಿಯನ್ನು ಒದಗಿಸಿದೆ. ಜಿಯೋಹಾಟ್ ಸ್ಟಾರ್ ಸರಾಸರಿ 45 ಕೋಟಿ ಮಾಸಿಕ ಸರಾಸರಿ ವೀಕ್ಷಕರನ್ನು ಹೊಂದಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 13ರಷ್ಟು ಹೆಚ್ಚಳ ಆಗಿದೆ. ಇದು ಐಪಿಎಲ್ ಅವಧಿಯಲ್ಲಿ ಎಷ್ಟು ಇತ್ತೋ ಆ ಪ್ರಮಾಣದಷ್ಟೇ ಇದೆ.
ಈ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚವು 33,826 ಕೋಟಿ ಆಗಿದೆ. ಅದನ್ನು 41,303 ಕೋಟಿ ನಗದು ಲಾಭದಿಂದ ಕವರ್ ಮಾಡಲಾಗಿದೆ. ನಿವ್ವಳ ಸಾಲದ ಪ್ರಮಾಣವು ಡಿಸೆಂಬರ್ 31ರ ಹೊತ್ತಿಗೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕಡಿಮೆಯಾಗಿ, 1.17 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಒಟ್ಟಾರೆ ಆಯವ್ಯಯ ಪತ್ರವು ಸ್ಥಿರತೆಯನ್ನು ಪ್ರತಿಬಿಂಬಿಸುತ್ತಿದೆ.


