January18, 2026
Sunday, January 18, 2026
spot_img

ನಿಯಮ ಮೀರಿ ಧಾರ್ಮಿಕ ಚಟುವಟಿಕೆ: ಉತ್ತರ ಪ್ರದೇಶದಲ್ಲಿ 15 ಮಂದಿ ವಿರುದ್ಧ FIR

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನುಮತಿಯಿಲ್ಲದೆ ಖಾಲಿ ಮನೆಯೊಂದರಲ್ಲಿ ಗುಂಪಾಗಿ ನಮಾಜ್ ಮಾಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್‌ಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾನೂನು ಉಲ್ಲಂಘನೆಯ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮದ ಕೆಲವು ಖಾಲಿ ಮನೆಗಳನ್ನು ಅನಧಿಕೃತವಾಗಿ ‘ತಾತ್ಕಾಲಿಕ ಮದರಸಾ’ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬರುತ್ತಿದ್ದವು. ಈ ಬಗ್ಗೆ ನಿಗಾ ವಹಿಸಿದ್ದ ಪೊಲೀಸರಿಗೆ, ಖಾಲಿ ಮನೆಯೊಂದರಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್‌ಪಿ (ದಕ್ಷಿಣ) ಅಂಶಿಕಾ ವರ್ಮಾ ಅವರು, “ಯಾವುದೇ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕವಾಗಿ ಅಥವಾ ಖಾಲಿ ಜಾಗಗಳಲ್ಲಿ ಧಾರ್ಮಿಕ ಚಟುವಟಿಕೆ ನಡೆಸುವುದು ಕಾನೂನುಬಾಹಿರ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಇಂತಹ ಚಟುವಟಿಕೆಗಳನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಸಿದ್ದಾರೆ.

ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಮನೆ ಹನೀಫ್ ಎಂಬುವವರಿಗೆ ಸೇರಿದ್ದಾಗಿದ್ದು, ಶುಕ್ರವಾರದ ಪ್ರಾರ್ಥನೆಗಾಗಿ ಇದನ್ನು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಬಂಧಿತರ ಮೇಲೆ ಶಾಂತಿ ಭಂಗ ಉಂಟುಮಾಡಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಸದ್ಯ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಧಾರ್ಮಿಕ ಚಟುವಟಿಕೆಗಳಿಗೆ ನಿಗದಿತ ಸ್ಥಳಗಳನ್ನು ಬಳಸುವಂತೆ ಮತ್ತು ಯಾವುದೇ ಹೊಸ ಸಂಪ್ರದಾಯ ಅಥವಾ ಚಟುವಟಿಕೆ ಆರಂಭಿಸುವ ಮುನ್ನ ಆಡಳಿತ ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಪೊಲೀಸ್ ಇಲಾಖೆ ಜನರಲ್ಲಿ ಮನವಿ ಮಾಡಿದೆ.

Must Read

error: Content is protected !!