ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಇಂದು ಸಿಸಿಎಚ್ 64 ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಇಂದು ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಲಿದೆ ಎಂಬ ನಿರೀಕ್ಷೆ ಇದ್ದರೂ, ಅದು ಮುಂದೂಡಿಕೆಯಾಗಿದೆ. ಆರೋಪಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಕಾರಣ, ನ್ಯಾಯಾಧೀಶರು ನೇರ ವಿಚಾರಣೆ ನಡೆಸಲು ನವೆಂಬರ್ 3ರಂದು ಹೊಸ ದಿನಾಂಕ ನಿಗದಿ ಮಾಡಿದ್ದಾರೆ.
ನ್ಯಾಯಾಧೀಶರು ಸ್ಪಷ್ಟವಾಗಿ ತಿಳಿಸಿದ್ದು, ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಬೇಕಾದರೆ ಆರೋಪಿಗಳು ಕಡ್ಡಾಯವಾಗಿ ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಕ್ರಿಯೆ ನಡೆಸದಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಹೀಗಾಗಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ನವೆಂಬರ್ 3ರಂದು ಆರೋಪಿಗಳು ಕೋರ್ಟ್‌ನಲ್ಲಿ ಹಾಜರಾಗದಿದ್ದರೆ, ಜಾಮೀನು ರಹಿತ ವಾರೆಂಟ್ (Non-bailable Warrant) ಜಾರಿ ಮಾಡಲಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ. ಈ ಹಿನ್ನೆಲೆ ಎಲ್ಲ ಆರೋಪಿಗಳಿಗೂ ಕೋರ್ಟ್‌ನಲ್ಲಿ ಹಾಜರಾಗುವ ಸೂಚನೆ ನೀಡಲಾಗಿದೆ.
ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಲಿರುವ ನವೆಂಬರ್ 3ರಂದೇ, ಮುಂದಿನ ಟ್ರಯಲ್ ಡೇಟ್ ಕೂಡ ಫಿಕ್ಸ್ ಆಗುವ ಸಾಧ್ಯತೆ ಇದೆ ಎಂದು ಕೋರ್ಟ್ ವಲಯದ ಮೂಲಗಳು ತಿಳಿಸಿವೆ.

