ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಅತ್ಯಂತ ಪ್ರಮುಖ ದಿನ. ಪ್ರಕರಣದ ಪ್ರಮುಖ ಹಂತವಾಗಿ 64ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಲಿದ್ದು, ಆರೋಪಿಗಳ ಮೇಲೆ ದೋಷಾರೋಪ ನಿಗದಿಯಾಗಲಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಭವಿಷ್ಯ ಇದೇ ವಿಚಾರಣೆಯಿಂದ ಬಹುತೇಕ ನಿರ್ಧಾರವಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಎ2 ಆರೋಪಿಯಾದ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳು ಇಂದು ಕಡ್ಡಾಯವಾಗಿ ಕೋರ್ಟ್‌ಗೆ ಹಾಜರಾಗಬೇಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ದರ್ಶನ್ ಮತ್ತು ಪವಿತ್ರಾಗೌಡರನ್ನು ಸಿಎಆರ್ ಪೊಲೀಸ್ ತುಕಡಿಯ ಭದ್ರತೆಯಲ್ಲಿ ಕೋರ್ಟ್‌ಗೆ ಕರೆತರಲಾಗಿದೆ. ಸ್ಥಳದಲ್ಲೂ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ವಿಚಾರಣೆ ವೇಳೆ ನ್ಯಾಯಾಧೀಶರು ಆರೋಪಿಗಳ ಮೇಲೆ ದಾಖಲಾಗಿರುವ ಸೆಕ್ಷನ್‌ಗಳನ್ನು ಓದಿ ಹೇಳಲಿದ್ದಾರೆ. “ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 364 (ಅಪಹರಣ), 202 (ಸಾಕ್ಷ್ಯ ನಾಶ) ಅಡಿಯಲ್ಲಿ ಕೇಸ್ ದಾಖಲಾಗಿದೆ. ನೀವು ಇದನ್ನು ಒಪ್ಪುತ್ತೀರಾ ಅಥವಾ ಅಲ್ಲಗೆಳೆಯುತ್ತೀರಾ?” ಎಂದು ನ್ಯಾಯಾಧೀಶರು ಪ್ರಶ್ನಿಸಲಿದ್ದಾರೆ. ಆರೋಪಿಗಳು ನೀಡುವ ಪ್ರತಿಕ್ರಿಯೆ ಆಧರಿಸಿ ಮುಂದಿನ ಹಂತ ನಿರ್ಧಾರವಾಗಲಿದೆ.
ದೋಷಾರೋಪ ಪ್ರಕ್ರಿಯೆ ಆರಂಭವಾದ ಬಳಿಕ, ಕೇಸ್‌ನ ನಿಜವಾದ ಕಾನೂನು ಹೋರಾಟ ಪ್ರಾರಂಭವಾಗಲಿದೆ. ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧದ ಸಾಕ್ಷ್ಯಗಳು, ವಿಶೇಷವಾಗಿ ತಾಂತ್ರಿಕ ಸಾಕ್ಷ್ಯಾಧಾರಗಳು (Technical Evidence), ಮುಂದಿನ ಹಂತದಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

