ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಅವರು ಜೈಲಿನಲ್ಲಿ ಮುಂದುವರೆಯಬೇಕಾಗಿದೆ.
ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ಆಧರಿಸಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 30ರಂದು ನಡೆದ ವಿಚಾರಣೆಯಲ್ಲಿ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದರು. ಪವಿತ್ರಾ ಗೌಡ ವಿರುದ್ಧದ ಆರೋಪಪಟ್ಟಿ ಬಿಎನ್‌ಎಸ್ (BNS) ಬದಲು ಸಿಆರ್‌ಪಿಸಿ (CRPC) ಅಡಿಯಲ್ಲಿ ಸಲ್ಲಿಕೆ ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿರುವುದರಿಂದ, ಅವರ ಕಕ್ಷಿದಾರರಿಗೆ ಕಡ್ಡಾಯ ಜಾಮೀನು ಸಿಗಬೇಕು ಎಂದು ವಾದಿಸಿದರು. ಆದರೆ ನ್ಯಾಯಾಲಯ ವಾದ-ಪ್ರತಿವಾದಗಳನ್ನು ಆಲಿಸಿ ಸೆಪ್ಟೆಂಬರ್ 2ರಂದು ತೀರ್ಪು ಕಾಯ್ದಿರಿಸಿತ್ತು. ಇಂದು ಹೊರಬಿದ್ದ ಆದೇಶದಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಯಿತು.
ಇದರ ಒಟ್ಟಿಗೆ ನಟ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್‌ರನ್ನು ಶಿವಮೊಗ್ಗ ಜೈಲಿಗೆ, ನಾಗರಾಜ್‌ರನ್ನು ಕಲಬುರಗಿ ಜೈಲಿಗೆ ಹಾಗೂ ಪ್ರದೂಷ್‌ರನ್ನು ಬೆಳಗಾವಿ ಜೈಲಿಗೆ ವರ್ಗಾಯಿಸುವಂತೆ ಸಲ್ಲಿಸಿರುವ ಅರ್ಜಿ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಸಲ್ಲಿಸಿರುವ ಅರ್ಜಿಗಳ ಮೇಲೂ ನ್ಯಾಯಾಲಯ ತೀರ್ಪು ನೀಡಲಿದೆ. ಅಲ್ಲದೆ ದರ್ಶನ್ ಪರವಾಗಿ ಸಲ್ಲಿಸಲಾದ ದಿಂಬು, ಬೆಡ್‌ಶೀಟ್ ಒದಗಿಸುವ ಅರ್ಜಿಯ ಮೇಲೂ ಇಂದು ಆದೇಶ ಹೊರಬೀಳುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಆಗಸ್ಟ್ 14ರಂದು ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದರ ಪರಿಣಾಮವಾಗಿ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಮತ್ತೆ ಜೈಲಿಗೆ ಹಿಂತಿರುಗಬೇಕಾಯಿತು.