ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2025ರ ಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇರುವ ವೇಳೆ ಭಾರತ–ಪಾಕಿಸ್ತಾನ ಕ್ರಿಕೆಟ್ ಸಂಘರ್ಷ ಮತ್ತೊಮ್ಮೆ ಹೊಸ ತಿರುವು ಪಡೆದುಕೊಂಡಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಭಾರತೀಯ ವೇಗಿ ಅರ್ಷದೀಪ್ ಸಿಂಗ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಅಧಿಕೃತ ದೂರು ಸಲ್ಲಿಸಿದೆ. ಸೂಪರ್-4 ಹಂತದ ಭಾರತ–ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಅರ್ಷದೀಪ್ ಪ್ರೇಕ್ಷಕರ ಕಡೆ ಅಶ್ಲೀಲ ಸನ್ನೆ ಮಾಡಿದ್ದಾರೆ ಎಂದು ಪಿಸಿಬಿ ತನ್ನ ದೂರಿನಲ್ಲಿ ಆರೋಪಿಸಿದೆ.
ಪಿಸಿಬಿ ನೀಡಿದ ಮಾಹಿತಿಯ ಪ್ರಕಾರ, ಇಂತಹ ನಡೆ ಕ್ರೀಡಾಂಗಣದಲ್ಲಿ ಶಿಸ್ತಿಗೆ ವಿರುದ್ಧವಾಗಿದ್ದು, ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಹೀಗಾಗಿ ಅರ್ಷದೀಪ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ.
ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧವೂ ದೂರು ದಾಖಲಿಸಿತ್ತು. ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಸೂರ್ಯಕುಮಾರ್ ಭಾರತೀಯ ಸೇನೆಗೆ ಜಯ ಅರ್ಪಿಸಿದ್ದರು ಹಾಗೂ ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದರು. ಇದನ್ನು ಕ್ರಿಕೆಟ್ ಅನ್ನು ರಾಜಕೀಯಗೊಳಿಸಿರುವುದಾಗಿ ಪಿಸಿಬಿ ಆರೋಪಿಸಿತ್ತು. ಈ ಪ್ರಕರಣದಲ್ಲಿ ಐಸಿಸಿ ಸೂರ್ಯಕುಮಾರ್ ಮೇಲೆ ಪಂದ್ಯ ಶುಲ್ಕದ 30 ಶೇಕಡಾ ದಂಡ ವಿಧಿಸಿತ್ತು.
ಇದೇ ಸಂದರ್ಭದಲ್ಲಿ ಬಿಸಿಸಿಐ ಕೂಡಾ ಪಾಕಿಸ್ತಾನ ಆಟಗಾರರಾದ ಹಾರಿಸ್ ರೌಫ್ ಮತ್ತು ಸಾಹಿಬ್‌ಝಾದ ಫರ್ಹಾನ್ ವಿರುದ್ಧ ದೂರು ದಾಖಲಿಸಿತ್ತು. ಪಂದ್ಯದಲ್ಲಿ ದುರ್ವರ್ತನೆ ತೋರಿದ್ದಕ್ಕಾಗಿ ಐಸಿಸಿ ಹಾರಿಸ್ ರೌಫ್‌ಗೆ ದಂಡ ವಿಧಿಸಿ, ಫರ್ಹಾನ್‌ಗೆ ಎಚ್ಚರಿಕೆ ನೀಡಿತ್ತು.