ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಯಕ್ರಮವೊಂದರಲ್ಲಿ ಅಸ್ವಸ್ಥಗೊಂಡು ವೇದಿಕೆ ಮೇಲೆಯೇ ಕುಸಿದುಬಿದ್ದಿದ್ದ ಮಾಜಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಮಣಿಪಾಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ರುದ್ರೇಶ್ ಅವರು ಮಾಹಿತಿ ನೀಡಿದ್ದು, ಸಂತೋಷ್ ಹೆಗ್ಡೆ ಅವರು ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದಾರೆ.ಯಾವುದೇ ಗಂಭೀರವಾದ ಆಘಾತವಿಲ್ಲ. ಸುಸ್ತಾಗಿದ್ದರಿಂದ ತಲೆಸುತ್ತು ಉಂಟಾಗಿ ಕುಸಿದುಬಿದ್ದಿದ್ದರು. ಅವರ ಬಿಪಿ ಮತ್ತು ಶುಗರ್ ಎಲ್ಲವೂ ನಾರ್ಮಲ್ ಇದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪಿ.ಜಿ.ಆರ್. ಸಿಂಧ್ಯಾ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂತೋಷ್ ಹೆಗ್ಡೆ ಅವರು, ದಿಢೀರ್ ಕುಸಿದುಬಿದ್ದರು. ಈ ವೇಳೆ ಅಲ್ಲಿಯೇ ಇದ್ದ ವೈದ್ಯರಾದ ರಮೇಶ್ ಬಾಬು ಅವರು ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಈ ವೇಳೆ ಅಲ್ಲಿಯೇ ಇದ್ದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ತಮ್ಮ ಅಧಿಕೃತ ಸರ್ಕಾರಿ ವಾಹನದಲ್ಲೇ ಸಂತೋಷ್ ಹೆಗ್ಡೆ ಅವರನ್ನು ಮಿಲರ್ಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆತಂದರು.



