Wednesday, December 31, 2025

‘ಡಿಜಿಟಲ್ ಅರೆಸ್ಟ್’ ಜಾಲಕ್ಕೆ ಬಿದ್ದ ನಿವೃತ್ತ ಶಿಕ್ಷಕ: 1.61 ಕೋಟಿ ರೂ.ಪಂಗನಾಮ!

ಹೊಸದಿಗಂತ ವರದಿ, ಮುಂಡಗೋಡ:

ತಾಲೂಕಿನ ಟಿಬೆಟಿಯನ್‌ ಕಾಲೋನಿಯ ನಿವೃತ್ತ ಶಿಕ್ಷಕನೊಬ್ಬ ಮುಂಬೈ ಪೊಲೀಸರ ಹೆಸರಿನಲ್ಲಿ ಬಂದ ವಾಟ್ಸ್ ಆಪ್ ಕರೆಗೆ ಬೆದರಿ ಬರೋಬ್ಬರಿ 1.61 ಕೋಟಿ ರೂಪಾಯಿಯನ್ನು ಕಳೆದುಕೊಂಡು ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ ಘಟನೆ ಬೆಳಕಿಗೆ ಬಂದಿದ್ದು ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಿಬೆಟಿಯನ್ ಕ್ಯಾಂಪ್ ನಂ.8ರ ನಿವಾಸಿ ಪಲ್ಡೆನ್ ಲೋಬ್ಸಂಗ್ ಚೊಡಾಕ್ ವಂಚನೆಗೊಳಗಾದ ಶಿಕ್ಷಕನಾಗಿದ್ದಾನೆ.

ಘಟನೆಯ ವಿವರ:
2025 ನವೆಂಬರ್ 29ರಂದು ಪಲ್ಡೆನ್ ಅವರಿಗೆ ಯುವತಿಯೊಬ್ಬಳು ವಾಟ್ಸ್ ಆಪ್ ಕರೆ ಮಾಡಿ ತಾನು ಮಹಾರಾಷ್ಟದ ಕೋಲವಾ ಪೊಲೀಸ್ ಠಾಣೆಯವಳು ನಮ್ಮ ಇನ್ಸ್ಪೆಕ್ಟರ್ ಮಾತನಾಡುತ್ತಾರೆ ಎಂದು ಬೇರೊಬ್ಬರಿಗೆ ಪೋನ್ ನೀಡಿ ನಾನು ಈ ಠಾಣೆಯ ಇನ್ಸ್‌ಪೆಕ್ಟರ್ ಮುಂಬಯಿಯಲ್ಲಿ ಇತ್ತಿಚೆಗೆ ಮುಂಬೈನಲ್ಲಿ ಓ.ಎಮ್.ಅಬ್ದುಲಸಲಾಂ ಎಂಬ ಉಗ್ರವಾದಿ ನಾಯಕನನ್ನು ಬಂಧಿಸಲಾಗಿದ್ದು ಆತನ ಬಳಿ ಸಿಕ್ಕ ಬರೋಬ್ಬರಿ 250 ಎ.ಟಿ.ಎಂ. ಕಾರ್ಡ್‌ಗಳು ಸಿಕ್ಕಿದ್ದು ಅದರಲ್ಲಿ ನಿಮ್ಮ ಹೆಸರಿನ ಕೆನರಾ ಬ್ಯಾಂಕ್ ಕಾರ್ಡ್ ಕೂಡ ಇದೆ ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಕೋಟ್ಯಾಂತರ ರೂಪಾಯಿ ಮನಿ ಲಾಂಡ್ರಿಂಗ್ ನಡೆದಿದ್ದು, ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾನೆ.

ಪಲ್ಡೆನ್ ಅವರ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣ ವರ್ಗಾವಣೆಯಾಗಿರುವ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಕೂಡ ಕಳುಹಿಸಿ ಆರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಸುಳ್ಳು ಬೆದರಿಕೆಗೆ ಹೆದರಿದ ಪಲ್ಡೆನ್ ತಮ್ಮ ಕೆನರಾ ಬ್ಯಾಂಕ್, ಎಸ್‌ಬಿಐ ಮತ್ತು ಕೆಡಿಸಿಸಿ ಬ್ಯಾಂಕ್‌ನಲ್ಲಿದ್ದ ಸ್ಥಿರ ಠೇವಣಿ (FD) ಹಣವನ್ನು ಬಿಡಿಸಿಕೊಂಡು ಹಾಗೂ ಪರಿಚಿತರಿಂದ ಸಾಲ ಪಡೆದು, ಡಿಸೆಂಬರ್ 3 ರಿಂದ ಡಿಸೆಂಬರ್ 11ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,61,00,047 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನಂತರ ಪೋನ್ ಕರೆ ಮಾಡಿ ನಮ್ಮ ತನಿಖೆ ಮುಗಿದಿದೆ ತನಿಖೆಯ ನಂತರ ನಿಮ್ಮ ಹಣ ವರ್ಗಾವಣೆ ಮಾಡುತ್ತೇವೆ. ಇನ್ನೂ ಮುಂದೆ ಈಡಿ ತನಿಖೆ ನಡೆಯಲಿದೆ. ಅವರು ಕೂಡ ನಿಮ್ಮ ಮನೆಗೆ ಬಂದು ಬಂದಿಸುವ ಸಾಧ್ಯತೆ ಇದೆ ಎಂದು ಮತ್ತೆ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ದಿಕ್ಕೂ ತೋಚದೆ ಇದ್ದಾಗ ತನ್ನ ಸ್ನೇಹಿತನ ಹತ್ತಿರ ಹೋಗಿ ಹಣ ನೀಡುವಂತೆ ಪಲ್ಡೇನ್ ಕೇಳಿದಾಗ ಸ್ನೇಹಿತ ಎಲ್ಲ ವಿವರ ಬಾಯಿ ಬಿಡಿಸಿದ್ದಾನೆ. ನಂತರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೊಸದಿಗಂತದೊಂದಿಗೆ ಮಾತನಾಡಿ ತಿಳಿಸಿದ್ದಾನೆ.

error: Content is protected !!