ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಗೆ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಅಧಿಕೃತವಾಗಿ ನೀಡದಿದ್ದರೂ ತಾವು ಹೊಂದಿರುವುದಾಗಿ ಹೇಳಿಕೊಂಡಿರುವ ಮತದಾರರ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್) ತನಿಖೆಗಾಗಿ ಹಿಂದಿರುಗಿಸುವಂತೆ ಸೂಚಿಸಿದೆ.
ನೀವು (ತೇಜಸ್ವಿ ಯಾದವ್) ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಅಧಿಕೃತವಾಗಿ ನೀಡಲಾಗಿಲ್ಲ ಎಂದು ಹೇಳಿದ್ದೀರಿ. ಈ ಕುರಿತು ವಿವರವಾದ ತನಿಖೆ ನಡೆಸುವ ಸಲುವಾಗಿ ಈಗ ನಿಮ್ಮ ಬಳಿ ಎಪಿಕ್ ಕಾರ್ಡ್ ಅನ್ನು ಕೂಡಲೇ ಹಿಂದಿರುಗಿಸಬೇಕು’ ಎಂದು ಚುನಾವಣಾ ಆಯೋಗವು ಪತ್ರದಲ್ಲಿ ಉಲ್ಲೇಖಿಸಿದೆ.
2020ರ ವಿಧಾನಸಭಾ ಚುನಾವಣೆ ವೇಳೆ ತೇಜಸ್ವಿ ಯಾದವ್ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿನ ಸಂಖ್ಯೆ ಮತ್ತು ಈಗಿರುವ ಎಪಿಕ್ ಕಾರ್ಡ್ ಸಂಖ್ಯೆ ಎರಡು ಒಂದೇ ಆಗಿದೆ. ಒಂದು ವೇಳೆ ತೇಜಸ್ವಿ ಅವರು ಇನ್ನೊಂದು ಸಂಖ್ಯೆಯ ಎಪಿಕ್ ಕಾರ್ಡ್ ಹೊಂದಿದ್ದರೆ, ಅದು ತನಿಖೆಯ ವಿಷಯವಾಗುತ್ತದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿ, ಚುನಾವಣಾ ಆಯೋಗವು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಯಾದವ್ ಶನಿವಾರ ಆರೋಪಿಸಿದ್ದರು.