ಚಳಿಗಾಲ ಬಂದರೆ ಮಾರುಕಟ್ಟೆ ತುಂಬಾ ಹಸಿರು ಹಸಿರು ತಾಜಾ ಬಟಾಣಿ ಕಾಣಿಸುತ್ತೆ. ಆ ಸಮಯದಲ್ಲಿ ಬಟಾಣಿಯಿಂದ ಮಾಡೋ ಅಡುಗೆಗಳಿಗೆ ಬೇರೆನೇ ರುಚಿ, ಬೇರೆನೇ ಸುವಾಸನೆ. ಅದೇ ಬಟಾಣಿ ಸೀಸನ್‌ನ ಸವಿ ರುಚಿ ಹೊಂದಿರುವ ಸ್ಪೆಷಲ್ ಬಟಾಣಿ ಬಾತ್ ಈ ಸೀಸನ್‌ನಲ್ಲಿ ಒಂದ್ಸಲ ಆದ್ರೂ ಮಾಡ್ಬೇಕಾದ ತಿಂಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಹಸಿರು ಬಟಾಣಿ – 1 ಕಪ್
ಈರುಳ್ಳಿ – 1
ಟೊಮೇಟೊ – 1
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿಮೆಣಸು – 2
ದಾಲ್ಚಿನ್ನಿ – 1 ತುಂಡು
ಲವಂಗ – 3–4
ಏಲಕ್ಕಿ – 2
ತೆಜಪತ್ತೆ – 1
ಜೀರಿಗೆ – 1 ಟೀ ಸ್ಪೂನ್
ಬಾತ್ ಪುಡಿ ಅಥವಾ ಗರಂ ಮಸಾಲಾ – 1½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ನೀರು – 2 ಕಪ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷ ನೆನೆಸಿಡಿ. ಕುಕ್ಕರ್ ಅಥವಾ ಆಳವಾದ ಪಾತ್ರೆಯಲ್ಲಿ ಎಣ್ಣೆ/ತುಪ್ಪ ಬಿಸಿ ಮಾಡಿ, ಜೀರಿಗೆ, ದಾಲ್ಚಿನ್ನಿ, ಲವಂಗ, ಏಲಕ್ಕಿ, ತೆಜಪತ್ತೆ ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ.
ಇದಕ್ಕೆ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಈಗ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ಹಸಿರು ಬಟಾಣಿ ಮತ್ತು ಟೊಮೇಟೊ ಸೇರಿಸಿ 2–3 ನಿಮಿಷ ಬೇಯಿಸಿ. ಬಾತ್ ಪುಡಿ/ಗರಂ ಮಸಾಲಾ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೆನೆಸಿದ ಅಕ್ಕಿ ಸೇರಿಸಿ ಒಂದು ಬಾರಿ ನಿಧಾನವಾಗಿ ಕಲಸಿ. ನೀರು ಸೇರಿಸಿ ಕುಕ್ಕರ್ ಮುಚ್ಚಿ 2–3 ವಿಶಲ್ ಬರುವವರೆಗೆ ಬೇಯಿಸಿ.


