Sunday, September 21, 2025

Rituals | ಶ್ರಾದ್ಧಾಚರಣೆ ಮಾಡುವುದರ ಹಿಂದಿನ ಉದ್ದೇಶವೇನು?

ಹಿಂದು ಸಂಪ್ರದಾಯದಲ್ಲಿ ಪಿತೃಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಪದ್ದತಿಯನ್ನು “ಶ್ರಾದ್ಧ” ಎಂದು ಕರೆಯಲಾಗುತ್ತದೆ. ಇದು ಸಾವಿರಾರು ವರ್ಷಗಳಿಂದ ಬಂದಿರುವ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದ್ದು, ಪಿತೃಗಳ ಆತ್ಮಶಾಂತಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ಮಾಡಲಾಗುತ್ತದೆ. ಪುರಾಣಗಳಲ್ಲಿ ಶ್ರಾದ್ಧವನ್ನು ಪಿತೃ ಋಣದಿಂದ ಮುಕ್ತವಾಗುವ ಮಾರ್ಗವೆಂದು ವಿವರಿಸಲಾಗಿದೆ.

ಹಿರಿಯರ ಪ್ರಕಾರ, ಶ್ರಾದ್ಧ ಮಾಡುವುದರಿಂದ ಪಿತೃಗಳು ತೃಪ್ತರಾಗುತ್ತಾರೆ ಮತ್ತು ಅವರ ಆಶೀರ್ವಾದದಿಂದ ಕುಟುಂಬದ ಶ್ರೇಯೋಭಿವೃದ್ಧಿ ಸಾಧ್ಯವಾಗುತ್ತದೆ. ಶ್ರಾದ್ಧದಲ್ಲಿ ಆಹಾರವನ್ನು ಅರ್ಪಿಸುವುದು, ಪಿಂಡಪ್ರದಾನ ಮಾಡುವುದು ಮತ್ತು ದಾನ ಧರ್ಮಗಳಲ್ಲಿ ತೊಡಗುವುದು ಪ್ರಮುಖ ಅಂಶಗಳಾಗಿವೆ. ಶ್ರಾದ್ಧದ ಮೂಲಕ ಪಿತೃಗಳನ್ನು ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸುವುದು ಕುಟುಂಬದ ಕರ್ತವ್ಯವೆಂದು ಪರಿಗಣಿಸಲಾಗಿದೆ.

ಇದಕ್ಕೂ ಮೀರಿಸಿ, ಶ್ರಾದ್ಧವನ್ನು ಕೇವಲ ಧಾರ್ಮಿಕ ವಿಧಿಯಷ್ಟೇ ಅಲ್ಲದೆ, ಪೀಳಿಗೆಯಿಂದ ಪೀಳಿಗೆ ಬರುವ ಸಂಸ್ಕೃತಿಯ ಭಾಗವೆಂದು ನೋಡಲಾಗುತ್ತದೆ. ಈ ಆಚರಣೆ ಮೂಲಕ ಕುಟುಂಬದವರು ಒಟ್ಟಾಗಿ ಸೇರುವುದರಿಂದ ಬಂಧುಬಳಗದ ಒಗ್ಗಟ್ಟು ಬಲವಾಗುತ್ತದೆ ಎಂಬ ನಂಬಿಕೆಯೂ ಇದೆ.

ಯಾರಿಗೆಲ್ಲ ಶ್ರಾದ್ಧ ತರ್ಪಣಗಳನ್ನು ಮಾಡಬೇಕು?
ಉಪಾಧ್ಯಾಯರು, ಗುರುಗಳು, ಹೆಣ್ಣು ಕೊಟ್ಟ ಮಾವ, ದೊಡ್ಡಪ್ಪ, ಚಿಕ್ಕಪ್ಪ, ಆಚಾರ್ಯ, ಸೋದರ ಮಾವ, ಮಾವನ ಅಣ್ಣ ತಮ್ಮ, ಅವರ ಮಕ್ಕಳು, ಶಿಷ್ಯ, ಯಜ್ಞ ಕರ್ಮಗಳನ್ನು ಮಾಡಿಸುವವನು, ಪೋಷಣೆ ಮಾಡಿದವರು, ತಂಗಿ, ಕೆಲಸ, ಸಂಪತ್ತು ನೀಡಿ ಆಸರೆ ಕೊಟ್ಟವರು, ಮಗಳು, ಅಳಿಯ, ತಾಯಿಯ ತಂಗಿಯ ಮಕ್ಕಳು, ತಂದೆ, ತಂದೆಯ ಪತ್ನಿ, ತಂದೆಯ ತಾಯಿ ಅಥವಾ ತಂದೆಯ ತಂಗಿ ಇವರೆಲ್ಲರಿಗೂ ತರ್ಪಣಾದಿಗಳನ್ನು ನೀಡಬಹುದು.

ಪಿತೃಪಕ್ಷದ 15 ದಿನಗಳಲ್ಲಿ ಶ್ರಾದ್ಧ ಮಾಡಲು ಸಾಧ್ಯವಾಗದಿದ್ದರೆ, ಎಲ್ಲಾ ಪೂರ್ವಜರ ಶ್ರಾದ್ಧವನ್ನು ಮಹಾಲಯ ಅಮಾವಾಸ್ಯೆಯಂದು ಸಾಮೂಹಿಕವಾಗಿ ಮಾಡಬಹುದು. ಇದನ್ನು ಸರ್ವ ಪಿತೃ ಶ್ರಾದ್ಧ ಎಂದೂ ಕರೆಯುತ್ತಾರೆ.

ಶ್ರಾದ್ಧಾಚರಣೆ ಪಿತೃಗಳನ್ನು ಸ್ಮರಿಸುವ ಧಾರ್ಮಿಕ ಕರ್ತವ್ಯವಾಗಿದ್ದರೂ, ಅದರ ಮೂಲ ಸಂದೇಶ ಕೃತಜ್ಞತೆ ಮತ್ತು ನೆನಪು. ಪಿತೃಗಳನ್ನು ಗೌರವಿಸುವ ಮೂಲಕ ಕುಟುಂಬದ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಮುಂದಿನ ಪೀಳಿಗೆಗೂ ತಲುಪಿಸಲಾಗುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಇದನ್ನೂ ಓದಿ