ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಫಿಟ್‌ನೆಸ್ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್ 13 ರಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅವರು ಯೋ-ಯೋ ಟೆಸ್ಟ್ ಜೊತೆಗೆ ಬ್ರಾಂಕೋ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಹಿಟ್‌ಮ್ಯಾನ್ ಅವರ ದೈಹಿಕ ಸ್ಥಿತಿ ಹಾಗೂ ಆಟಕ್ಕೆ ಸಿದ್ಧತೆಯನ್ನು ಪರಿಶೀಲಿಸಲು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಫಿಟ್‌ನೆಸ್ ಟೆಸ್ಟ್‌ನಲ್ಲಿ ಪ್ರಮುಖವಾದ ಯೋ-ಯೋ ಟೆಸ್ಟ್ ಮೂಲಕ ಆಟಗಾರರ ದೈಹಿಕ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. 20 ಮೀಟರ್ ಅಳತೆಯ ಒಳಗೆ ನಿಗದಿಪಡಿಸಿದ ಮಾರ್ಗದಲ್ಲಿ ಬೀಪ್ ಧ್ವನಿಯ ಪ್ರಕಾರ ಕ್ರಮಬದ್ಧ ಓಟ ನಡೆಸಬೇಕಾಗುತ್ತದೆ. ನಿಗದಿತ ಸಮಯವಾದ 8.15 ನಿಮಿಷಗಳಲ್ಲಿ 2 ಕಿಮೀ ಓಡಲು ವಿಫಲವಾದರೆ ಪರೀಕ್ಷೆಯಲ್ಲಿ ಯೋಗ್ಯರಲ್ಲ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಆಟಗಾರರ ಶಾರೀರಿಕ ಸಾಮರ್ಥ್ಯ ಹಾಗೂ ತಾಳ್ಮೆಯನ್ನು ನಿಖರವಾಗಿ ಪರೀಕ್ಷಿಸಲಾಗುತ್ತದೆ.
ಇದರೊಂದಿಗೆ, ರೋಹಿತ್ ಶರ್ಮಾ ಬ್ರಾಂಕೋ ಟೆಸ್ಟ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ. ಸಾಮಾನ್ಯವಾಗಿ ರಗ್ಬಿ ಆಟಗಾರರ ಫಿಟ್‌ನೆಸ್ ಅಳೆಯಲು ಬಳಸುವ ಈ ಪರೀಕ್ಷೆಯನ್ನು ಇದೀಗ ಭಾರತೀಯ ಕ್ರಿಕೆಟ್ ಆಟಗಾರರಿಗೂ ಅಳವಡಿಸಲಾಗಿದೆ. ಈ ಮೂಲಕ ಅವರ ದೈಹಿಕ ಸ್ಥಿತಿ ಮತ್ತು ತಾಳ್ಮೆಯ ಸಾಮರ್ಥ್ಯದ ಸಮಗ್ರ ಚಿತ್ರಣ ದೊರೆಯಲಿದೆ.
ಕಳೆದ ಆರು ತಿಂಗಳಿಂದ ಟೀಮ್ ಇಂಡಿಯಾ ಪರ ಯಾವ ಪಂದ್ಯವನ್ನೂ ಆಡದ ರೋಹಿತ್ ಶರ್ಮಾ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದರೂ, ಅವರು 2027ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಫಿಟ್‌ನೆಸ್ ಪರೀಕ್ಷೆ ಬಿಸಿಸಿಐಗೆ ಅತ್ಯಂತ ಮಹತ್ವದ್ದಾಗಿದೆ.