ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಮುಕ್ತಾಯಗೊಂಡಿದೆ. ಭಾರತ ಸರಣಿಯನ್ನು 1-2 ಅಂತರದಿಂದ ಸೋತು ತನ್ನ ತವರಿಗೆ ವಾಪಸ್ಸಾಗುತ್ತಿದೆ.
ಇತ್ತ ಆಸ್ಟ್ರೇಲಿಯಾದಿಂದ ಹೊರಡುವುದಕ್ಕೂ ಮುನ್ನ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಆಸ್ಟ್ರೇಲಿಯಾಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಪ್ರದರ್ಶನ ಅದ್ಭುತವಾಗಿತ್ತು. ಮೊದಲ ಪಂದ್ಯದಲ್ಲಿ ರೋಹಿತ್ ವಿಫಲರಾದರೂ ಉಳಿದೆರಡು ಪಂದ್ಯಗಳಲ್ಲಿ ಗಮನಅರ್ಹ ಪ್ರದರ್ಶನ ನೀಡಿದರು. ಅದರಲ್ಲೂ ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ರೋಹಿತ್, ಸರಣಿಯಲ್ಲಿ 202 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಮಾತ್ರವಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಇದೀಗ ಆಸ್ಟ್ರೇಲಿಯಾದಿಂದ ಹೊರಡುವುದಕ್ಕೂ ಮುನ್ನ ರೋಹಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗೆ ‘ಕೊನೆಯ ಬಾರಿಗೆ ಸಿಡ್ನಿಗೆ ವಿದಾಯ’ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ರೋಹಿತ್ ಅವರ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದ್ದು, ಇದು ರೋಹಿತ್ ಅವರು ಏಕದಿನ ಕ್ರಿಕೆಟ್‌ನಿಂದ ನಿರ್ಗಮಿಸುವುದನ್ನು ಸೂಚಿಸುತ್ತಿದೆಯೇ ಅಥವಾ ಆಸ್ಟ್ರೇಲಿಯಾ ಪ್ರವಾಸದ ಹಳೆಯ ನೆನಪುಗಳನ್ನು ಮತ್ತೆ ಹುಟ್ಟುಹಾಕುತ್ತಿದೆಯೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

