March 17, 2026
Tuesday, March 17, 2026
spot_img

ಸಾಲು ಸಾಲು ರಜೆ ಎಫೆಕ್ಟ್‌ | ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಟ್ರಾಫಿಕ್‌ ಸಂಕಷ್ಟ’: ಪ್ರಯಾಣಿಕರ ಪರದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಜೆಗಳ ಸರಣಿ ಶುರುವಾದ ಬೆನ್ನಲ್ಲೇ ಬೆಂಗಳೂರು ಹೊರವಲಯದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಶನಿವಾರ–ಭಾನುವಾರ ವೀಕೆಂಡ್‌ ಹಾಗೂ ಸೋಮವಾರ ಗಣರಾಜ್ಯೋತ್ಸವ ರಜೆ ಇರುವುದರಿಂದ ನಗರ ತೊರೆಯುವವರ ಸಂಖ್ಯೆ ಏಕಾಏಕಿ ಹೆಚ್ಚಿದ್ದು, ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

22ಕ್ಕೂ ಹೆಚ್ಚು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿರುವ ನೆಲಮಂಗಲ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಒತ್ತಡ ಹೆಚ್ಚಾಗಿದೆ. ತಮ್ಮ ಊರುಗಳಿಗೆ ತೆರಳುವವರು ಹಾಗೂ ಪ್ರವಾಸಿ ತಾಣಗಳತ್ತ ಹೊರಟವರಿಂದ ಹೆದ್ದಾರಿಯಲ್ಲಿ ಸಂಚಾರ ನಿಧಾನಗೊಂಡಿದೆ. ವಿಶೇಷವಾಗಿ ನೆಲಮಂಗಲ–ಕುಣಿಗಲ್ ಬೈಪಾಸ್ ಬಳಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಬಿಸಿಲಿನ ನಡುವೆ ಗಂಟೆಗಟ್ಟಲೆ ವಾಹನಗಳಲ್ಲಿ ಸಿಲುಕಿರುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಂತೆ ಕಂಡುಬಂದಿದ್ದು, ಅಗತ್ಯ ಸೌಲಭ್ಯಗಳ ಕೊರತೆಯಿಂದ ಜನರ ಅಸಮಾಧಾನವೂ ಹೆಚ್ಚಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರದ ಕಾರಣ ಖಾಸಗಿ ವಾಹನಗಳ ಮೇಲೆ ಅವಲಂಬನೆ ಹೆಚ್ಚಿರುವುದೂ ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿದೆ. ಪೊಲೀಸರು ಸಂಚಾರ ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದರೂ, ವಾಹನಗಳ ಭಾರೀ ಸಂಖ್ಯೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಕ್ಕೆ ಸಮಯ ತೆಗೆದುಕೊಳ್ಳುತ್ತಿದೆ.

ಮುಂದಿನ ಎರಡು ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮತ್ತು ಅಗತ್ಯವಿದ್ದರೆ ಮಾತ್ರ ಪ್ರಯಾಣ ಕೈಗೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !