ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಹೊಂದಿರುವ ಹವ್ಯಕ ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ‘ಹವ್ಯಕ ಭಾಷಾ ಅಕಾಡೆಮಿ’ಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಮಲೆನಾಡು ಮತ್ತು ಕರಾವಳಿ ಭಾಗದ ಪ್ರಮುಖ ಭಾಷೆಗಳಲ್ಲಿ ಒಂದಾದ ಹವ್ಯಕ ಭಾಷೆಗೆ ದೀರ್ಘಕಾಲದ ಇತಿಹಾಸವಿದೆ. ಈ ಭಾಷೆಯ ಸಾಹಿತ್ಯ, ಕಲೆ, ಯಕ್ಷಗಾನ ಮತ್ತು ವಿಶಿಷ್ಟ ಶೈಲಿಯ ಸಂಭಾಷಣೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತ್ಯೇಕ ಅಕಾಡೆಮಿಯ ಅಗತ್ಯವಿತ್ತು. ಇದನ್ನು ಮನಗಂಡಿರುವ ಸರ್ಕಾರವು ಈಗ ಅಧಿಕೃತವಾಗಿ ಅಕಾಡೆಮಿ ರಚನೆಗೆ ಮುಂದಾಗಿದೆ.
ಹವ್ಯಕ ಭಾಷೆಯ ವಿಶಿಷ್ಟ ಪದಕೋಶ ಮತ್ತು ಜನಪದ ಸಾಹಿತ್ಯದ ದಸ್ತಾವೇಜಿಗೆ ಈ ಅಕಾಡೆಮಿ ಸಹಕಾರಿಯಾಗಲಿದೆ.
ನಶಿಸುತ್ತಿರುವ ಭಾಷಾ ಸೊಗಡನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಂಶೋಧನೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ದಶಕಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಹವ್ಯಕ ಸಮುದಾಯದ ಪ್ರಮುಖರು ಮತ್ತು ಸಾಹಿತಿಗಳು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ.



