ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿ ರೆಕಾರ್ಡ್ ಬರೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈಗ ಹಳೇ ಮಾಲೀಕರಿಂದಲೇ ಹೊಸ ಕಂಟಕ ಎದುರಾಗಿದೆ. ತಂಡದ ಮಾಜಿ ಮಾಲೀಕ ರಾಜ್ ಕುಂದ್ರಾ, “ನನ್ನ ಪಾಲು ಸೆಟಲ್ ಆಗೋವರೆಗೂ ಈ ಬಿಸಿನೆಸ್ ಡೀಲ್ ನಡೆಯೋಕೆ ಬಿಡಲ್ಲ” ಅಂತ ಬಿಸಿಸಿಐ ಬಾಗಿಲು ತಟ್ಟಿದ್ದಾರೆ.
2009ರಲ್ಲಿ ರಾಜ್ ಕುಂದ್ರಾ ಸುಮಾರು 75 ಕೋಟಿ ಹೂಡಿಕೆ ಮಾಡಿ RR ತಂಡದ 11.7% ಪಾಲನ್ನು ಖರೀದಿ ಮಾಡಿದ್ದರು.
2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕುಂದ್ರಾ ಹೆಸರು ಕೇಳಿಬಂತು. ಬೆಟ್ಟಿಂಗ್ ಆಡಿದ್ದು ಸಾಬೀತಾದ ಮೇಲೆ ಬಿಸಿಸಿಐ ಇವರನ್ನು ಅಮಾನತು ಮಾಡಿತ್ತು. 2015ರಲ್ಲಿ ಲೋಧಾ ಸಮಿತಿ ಇವರನ್ನು ತಪ್ಪಿತಸ್ಥ ಅಂತ ತೀರ್ಪು ನೀಡಿತ್ತು.
“ತಂಡದಲ್ಲಿರೋ ನನ್ನ 11.7% ಶೇರುಗಳ ಕಥೆ ಏನಾಯ್ತು? ಅದು ಇತ್ಯರ್ಥ ಆಗೋವರೆಗೂ ಫ್ರಾಂಚೈಸಿ ಮಾಲೀಕರನ್ನು ಬದಲಾಯಿಸೋಕೆ ಬಿಡಲ್ಲ. ಈ ಕೂಡಲೇ ಹೊಸ ಒಪ್ಪಂದವನ್ನು ರದ್ದು ಮಾಡಿ” ಅಂತ ಕುಂದ್ರಾ ಈಗ ಬಿಸಿಸಿಐಗೆ ಖಡಕ್ ಪತ್ರ ಬರೆದಿದ್ದಾರೆ.
ಒಟ್ಟಿನಲ್ಲಿ, ಮೈದಾನದಲ್ಲಿ ರನ್ ಮಳೆ ಸುರಿಸಬೇಕಿದ್ದ ರಾಜಸ್ಥಾನ್ ರಾಯಲ್ಸ್, ಈಗ ಕೋರ್ಟ್ ಮತ್ತು ಬಿಸಿಸಿಐ ಅಂಗಳದಲ್ಲಿ ಕಾನೂನು ಹೋರಾಟ ನಡೆಸುವಂತಾಗಿದೆ.



