ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 16ನೇ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಟೂರ್ನಿಯಲ್ಲಿ ಇದುವರೆಗೆ ಸೋಲನ್ನೇ ಕಾಣದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಾಳೆ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.
ರಾಜಸ್ಥಾನ್ ರಾಯಲ್ಸ್ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದರೆ, ಆರ್ಸಿಬಿ ಆಡಿರುವ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ನಾಳೆಯ ಪಂದ್ಯದ ವಿಶೇಷವೆಂದರೆ, ಗೆದ್ದ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅದೇ ಸಮಯದಲ್ಲಿ, ಅಜೇಯವಾಗಿ ಮುನ್ನುಗ್ಗುತ್ತಿರುವ ಒಂದು ತಂಡಕ್ಕೆ ಇಂದು ಮೊದಲ ಸೋಲಿನ ಆಘಾತ ಎದುರಾಗುವುದು ಖಚಿತ.
ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನ ಇಲಾಖೆ ಸ್ವಲ್ಪ ಆತಂಕದ ಸುದ್ದಿ ನೀಡಿದೆ. ಗುವಾಹಟಿಯಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆ 56% ರಷ್ಟಿದೆ. ಕಳೆದ ಮಂಗಳವಾರ (ಏಪ್ರಿಲ್ 7) ಇದೇ ಮೈದಾನದಲ್ಲಿ ನಡೆದ ರಾಜಸ್ಥಾನ್ ಮತ್ತು ಮುಂಬೈ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಆ ಪಂದ್ಯವನ್ನು ತಲಾ 11 ಓವರ್ಗಳಿಗೆ ಕಡಿತಗೊಳಿಸಲಾಗಿತ್ತು. ಇಂದೂ ಕೂಡ ಮಳೆರಾಯ ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 34 ಬಾರಿ ಸೆಣಸಾಡಿವೆ. ಈ ಅಂಕಿಅಂಶಗಳಲ್ಲಿ ಬೆಂಗಳೂರು ತಂಡ ಮೇಲುಗೈ ಸಾಧಿಸಿದೆ.
ಆರ್ಸಿಬಿ ಗೆಲುವು: 17
ರಾಜಸ್ಥಾನ್ ಗೆಲುವು: 14
ಫಲಿತಾಂಶವಿಲ್ಲ: 03
ಕಳೆದ ಸೀಸನ್ನಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಆರ್ಸಿಬಿ ರಾಜಸ್ಥಾನವನ್ನು ಮಣಿಸಿತ್ತು. ಆದರೆ, ತನ್ನ ತವರು ಮೈದಾನದಲ್ಲಿ ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು 27 ರನ್ಗಳಿಂದ ಸೋಲಿಸಿರುವ ರಾಜಸ್ಥಾನ್ ರಾಯಲ್ಸ್ ಈಗ ಫುಲ್ ಫಾರ್ಮ್ನಲ್ಲಿದೆ. ಹೀಗಾಗಿ ನಾಳೆಯ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ.



