March 12, 2026
Thursday, March 12, 2026
spot_img

ಬಾಲ್ಯ ವಿವಾಹ ಮುಕ್ತ ಗ್ರಾ.ಪಂ.ಗಳಿಗೆ 25 ಸಾವಿರ ರೂ. ಬಹುಮಾನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ‌ ಕಠಿಣ ಕ್ರಮಕೈಗೊಳ್ಳಲಿದೆ. 18 ವರ್ಷ ಮೀರದೆ ನಿಶ್ಚಿತಾರ್ಥ ಮಾಡಿದರೂ ಶಿಕ್ಷೆಗೆ ಗುರಿ ಪಡಿಸಲಾಗುವುದು. ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ವತಿಯಿಂದ‌ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -25 ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೊಡನೆ ಮಕ್ಕಳ ಸಮಾಲೋಚನೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗಾಗಿಯೇ ಅಕ್ಕ ಪಡೆಯನ್ನು ಆರಂಭಿಸಲಾಗುತ್ತಿದೆ ಎಂದರು.

ನಾವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ನಂಬರ್ 1 ಸ್ಥಾನಕ್ಕೇರಲು ಪ್ರಯತ್ನಿಸಬೇಕು. ತಂದೆ, ತಾಯಿ, ಶಿಕ್ಷಕರ ಕನಸನ್ನು ನನಸಾಗಿಸಬೇಕು. ಪ್ರತಿಯೊಂದಕ್ಕೂ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.

ಮಕ್ಕಳ ರಕ್ಷಣೆಗೆ, ಮಕ್ಕಳ ಹಕ್ಕುಗಳನ್ನು ಕಾಪಾಡಲು ಸರ್ಕಾರ ಸಿದ್ಧವಿದೆ. ಸರ್ಕಾರ ಯಾವಾಗಲೂ ಮಕ್ಕಳ ಜತೆಗಿರುತ್ತದೆ. ಜಾತ್ಯಾತೀತವಾಗಿ, ಸುಶಿಕ್ಷಿತರಾಗಿ, ಸಂವಿಧಾನ ‌ಆರಾಧಕರಾಗಿ ಬೆಳೆಯಬೇಕು ಎಂದು ಸಚಿವರು ಕರೆ ನೀಡಿದರು.

ನಾನು ಏಳನೇ ತರಗತಿಗೆ ಬರುವವರೆಗೂ ನನ್ನ ಜಾತಿ ಯಾವುದು ಎಂದು ಗೊತ್ತಿರಲಿಲ್ಲ. ನಾನು ಶಾಲೆಯಲ್ಲಿ ಕಲಿಯುವಾಗ ಪ್ರಸಿದ್ಧರೊಬ್ಬರ ಭಾಷಣದಿಂದ ಪ್ರೇರಿತಳಾದೆ. ಅವರ ಭಾಷಣ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮಕ್ಕಳ ಪಾಲಿಗೆ ಮೊಬೈಲ್ ಎಂಬುದು ಸಾಮಾಜಿಕ ಪಿಡುಗಾಗಿದೆ. ಅದು ಕೇವಲ ಶಿಕ್ಷಕರ ಹೊಣೆಯಲ್ಲ. ಮನೆಯಲ್ಲಿ ಪಾಲಕರು ಮಕ್ಕಳು ಮೊಬೈಲ್ ಬಳಸದಂತೆ ನಿಗಾವಹಿಸಬೇಕು. ಮೊಬೈಲ್‌ನಿಂದ ಮಕ್ಕಳು ದೂರ ಇದ್ದರಷ್ಟೂ ಎತ್ತರಕ್ಕೆ ಬೆಳೆಯುತ್ತಾರೆ ಎಂದರು.

ಮಕ್ಕಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಚುನಾವಣೆ ಕೆಲಸಗಳಿಂದ ಮುಕ್ತಿಕೊಡಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದಾರೆ. ರಾಜ್ಯಾದ್ಯಂತ 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 50,000 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾನು ಸಚಿವೆಯಾದ ಬಳಿಕ ಕಳೆದ ಎರಡೂವರೆ ವರ್ಷಗಳಲ್ಲಿ 200 ಕೋಟಿ ರೂಪಾಯಿಗಳನ್ನು ಅಂಗನವಾಡಿ ಕಟ್ಟಡಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !