ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರ ಭದ್ರತೆ ಕುರಿತ ಆತಂಕ ಮತ್ತೊಂದು ಹಂತಕ್ಕೆ ತಲುಪಿದ್ದು, ಇದೀಗ ಮೊಟ್ಟೆ ಸೇವನೆ ವಿಚಾರ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ಅಸ್ಪಷ್ಟ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬಳಿಕ, ಜನರ ಆಹಾರ ಅಭ್ಯಾಸದಲ್ಲೇ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಪರಿಣಾಮವಾಗಿ, ಹಬ್ಬದ ಸಂಭ್ರಮದ ನಡುವೆಯೇ ಆಹಾರ ವ್ಯಾಪಾರಿಗಳಿಗೆ ಅಘಾತ ಎದುರಾಗಿದೆ.
ಕಳೆದ ಕೆಲವು ತಿಂಗಳಿನಿಂದ ಆಹಾರ ಕಲಬೆರಿಕೆ ಸಂಬಂಧಿತ ಚರ್ಚೆಗಳು ರಾಜ್ಯದಲ್ಲಿ ಹೆಚ್ಚಾಗಿವೆ. ಕಾಟನ್ ಕ್ಯಾಂಡಿಯ ಬಣ್ಣದ ವಿವಾದದಿಂದ ಆರಂಭವಾದ ಈ ಆತಂಕ, ಇಡ್ಲಿ, ಸಾಂಬಾರ್ ಸೇರಿದಂತೆ ನಿತ್ಯ ಬಳಕೆಯ ಆಹಾರಗಳವರೆಗೂ ವಿಸ್ತರಿಸಿದೆ. ಇದೇ ವಾತಾವರಣದಲ್ಲಿ ಮೊಟ್ಟೆ ಕುರಿತು ಹರಡಿದ ವದಂತಿಯು ಜನರನ್ನು ಇನ್ನಷ್ಟು ಗಾಬರಿಗೊಳಿಸಿದೆ. ಸ್ಪಷ್ಟ ಮಾಹಿತಿ ಸಿಗುವವರೆಗೂ ಕೆಲವರು ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಿದ ಆಹಾರಗಳಿಂದ ದೂರ ಉಳಿಯುತ್ತಿದ್ದಾರೆ.
ಈ ಪರಿಸ್ಥಿತಿಯ ನೇರ ಪರಿಣಾಮ ಬೆಂಗಳೂರು ನಗರದ ಬೇಕರಿ ಮತ್ತು ಕಾಂಡಿಮೆಂಟ್ಸ್ ಉದ್ಯಮದ ಮೇಲೆ ಬಿದ್ದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸೀಜನ್ ನಡುವೆಯೇ ವ್ಯಾಪಾರದಲ್ಲಿ ಸುಮಾರು ಶೇಕಡಾ 10ರಷ್ಟು ಇಳಿಕೆ ಕಂಡುಬಂದಿದೆ ಎನ್ನಲಾಗುತ್ತಿದೆ. ಎಗ್ ಪಫ್ಸ್, ಕೇಕ್‌ಗಳ ಮಾರಾಟ ಕುಸಿತಗೊಂಡಿದ್ದು, ಕೇಕ್ ಆರ್ಡರ್‌ಗಳು ಸಹ ಹಿಂದಿನಂತೆ ಬರ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

