ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರಲ್ಲಿ ರನ್ ಬರ ಎದುರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್, ಕೊನೆಗೂ ಅಬ್ಬರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸಂಜು, ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಈ ಸ್ಮರಣೀಯ ಇನಿಂಗ್ಸ್ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರಲ್ಲಿ ವಿಶಿಷ್ಟ ಹಾಗೂ ತಮಾಷೆಯ ಮನವಿಯೊಂದನ್ನು ಮಾಡಿದ್ದಾರೆ.
ಏಪ್ರಿಲ್ 11ರಂದು ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಜು ಕೇವಲ 56 ಎಸೆತಗಳಲ್ಲಿ ಅಜೇಯ 115 ರನ್ ಸಿಡಿಸಿ ಅಬ್ಬರಿಸಿದ್ದರು. ಪಂದ್ಯದ ನಂತರದ ಸಂದರ್ಶನದಲ್ಲಿ ಕಾಮೆಂಟೇಟರ್ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿದ ಸಂಜು, “ಸರ್, ನೀವು ನನಗೆ ಲಕ್ಕಿ ಚಾರ್ಮ್ ಇದ್ದಂತೆ. ದಯವಿಟ್ಟು ನನ್ನ ಪ್ರತಿ ಪಂದ್ಯಕ್ಕೂ ನೀವೇ ಬನ್ನಿ,” ಎಂದು ತಮಾಷೆಯಾಗಿ ವಿನಂತಿಸಿಕೊಂಡರು.
ಸಂಜು ಈ ರೀತಿ ಹೇಳಲು ಒಂದು ಬಲವಾದ ಕಾರಣವೂ ಇದೆ. ಸಂಜು ಸ್ಯಾಮ್ಸನ್ ಈ ಹಿಂದೆ ಅಂತರಾಷ್ಟ್ರೀಯ ಟಿ20ಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದಾಗ ರವಿಶಾಸ್ತ್ರಿ ಕಾಮೆಂಟರಿ ಪ್ಯಾನೆಲ್ನಲ್ಲಿದ್ದರು. ವಿಶೇಷವಾಗಿ ಹೈದರಾಬಾದ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮೊದಲು ಶಾಸ್ತ್ರಿ ಅವರು, “ನಿನಗೆ ಕೇವಲ ಒಂದು ದೊಡ್ಡ ಇನಿಂಗ್ಸ್ನ ಅವಶ್ಯಕತೆಯಿದೆ, ನಂತರ ಎಲ್ಲವೂ ಸರಿಹೋಗುತ್ತದೆ” ಎಂದು ಸಂಜುಗೆ ಧೈರ್ಯ ತುಂಬಿದ್ದರು. ಆ ಪಂದ್ಯದಲ್ಲಿ ಸಂಜು 111 ರನ್ ಸಿಡಿಸಿ ಮಿಂಚಿದ್ದರು.
ಅಷ್ಟೇ ಅಲ್ಲದೆ, 2026ರ ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಸಂಜು ಅಜೇಯ 97 ರನ್ ಗಳಿಸಿ ತಂಡವನ್ನು ಗೆಲ್ಲಿಸಿದಾಗಲೂ ಶಾಸ್ತ್ರಿ ಮೈದಾನದಲ್ಲೇ ಇದ್ದು ಸಂಜು ಆಟವನ್ನು ಕೊಂಡಾಡಿದ್ದರು. ಈಗ ಡೆಲ್ಲಿ ವಿರುದ್ಧ ಸೆಂಚುರಿ ಬಾರಿಸುವಾಗಲೂ ರವಿಶಾಸ್ತ್ರಿ ಅವರೇ ಕಾಮೆಂಟ್ರಿ ಮಾಡುತ್ತಿದ್ದರು. ಈ ಕಾಕತಾಳೀಯ ಘಟನೆಗಳಿಂದ ಪ್ರೇರಿತರಾದ ಸಂಜು, “ನೀವು ಮೈಕ್ ಹಿಡಿದು ಕಾಮೆಂಟರಿ ಬಾಕ್ಸ್ನಲ್ಲಿದ್ದಾಗ ನನ್ನ ಬ್ಯಾಟ್ನಿಂದ ದೊಡ್ಡ ರನ್ ಹರಿಯುತ್ತಿದೆ, ಹೀಗಾಗಿ ನೀವೇ ನಮಗೆ ಲಕ್ಕಿ,” ಎಂದು ಹೇಳುವ ಮೂಲಕ ನಗೆಚಟಾಕಿ ಹಾರಿಸಿದ್ದಾರೆ.



