ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳಿಂದ ಮುಂದುವರಿದಿರುವ ರಷ್ಯಾ–ಉಕ್ರೇನ್ ಯುದ್ಧಕ್ಕೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ನಿಲ್ಲಿಸುವ ದಿಕ್ಕಿನಲ್ಲಿ ಎರಡೂ ರಾಷ್ಟ್ರಗಳು ಮಹತ್ವದ ಹಂತ ತಲುಪಿವೆ ಎಂದು ಅವರು ತಿಳಿಸಿದ್ದಾರೆ.
ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿರುವ ತಮ್ಮ ಖಾಸಗಿ ನಿವಾಸದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಭಾನುವಾರ ಟ್ರಂಪ್ ಸುಮಾರು ಎರಡು ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದರು. ಸಭೆಯ ನಂತರ ಮಾತನಾಡಿದ ಟ್ರಂಪ್, ಯುದ್ಧ ಕೊನೆಗೊಳಿಸುವ ಕರಡು ಶಾಂತಿ ಒಪ್ಪಂದ ಬಹುತೇಕ ಪೂರ್ಣಗೊಂಡಿದ್ದು, ಪ್ರಕ್ರಿಯೆ ಸುಮಾರು 95 ಶೇಕಡಾ ಹಂತ ತಲುಪಿದೆ ಎಂದು ಹೇಳಿದರು. ಉಭಯ ರಾಷ್ಟ್ರಗಳ ನಡುವೆ ಸಮಾಧಾನದ ದಿಕ್ಕಿನಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ ಎಂದು ಅವರು ಹೇಳಿದರು.
ಈ ಸಭೆಗೆ ಮೊದಲು ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಯುದ್ಧ ಅಂತ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಶಾಂತಿ ಪ್ರಕ್ರಿಯೆಯ ಭಾಗವಾಗಿ ಉಕ್ರೇನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಉದ್ದೇಶವನ್ನೂ ಟ್ರಂಪ್ ವ್ಯಕ್ತಪಡಿಸಿದ್ದಾರೆ.

