Monday, December 1, 2025

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್: ರಕ್ಷಣಾ ಕ್ಷೇತ್ರದಲ್ಲಿ ಸಿಗಲಿದೆ ಮತ್ತಷ್ಟು ಬಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ಭಾರತಕ್ಕೆ ಆಗಮಿಸಲಿರುವ ಅವರು ಡಿಸೆಂಬರ್ 5ರಂದು ಹಿಂದಿರುಗಲಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಪುಟಿನ್ ಅವರು ಈ ಸಂದರ್ಭದಲ್ಲಿ ದೊಡ್ಡ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಇದರಲ್ಲಿ ಉನ್ನತ ಮಟ್ಟದ ರಕ್ಷಣಾ ಸಹಕಾರ ಮತ್ತು ಹೊಸ ಎಸ್-400 ಕ್ಷಿಪಣಿ ಒಪ್ಪಂದದ ಕಾರ್ಯಸೂಚಿಯು ಇರುವ ಸಾಧ್ಯತೆ ಇದೆ.

ವ್ಲಾಡಿಮಿರ್ ಪುಟಿನ್ ಅವರು 23ನೇ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇವರ ಈ ಭೇಟಿಯು ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತು ಭಾರತದ ಆಪರೇಷನ್ ಸಿಂದೂರ್ ಬಳಿಕ ನಡೆಯುವ ಮೊದಲ ಭೇಟಿಯಾಗಿದೆ.

ಈ ಸಂದರ್ಭ ರಕ್ಷಣಾ ಸಹಕಾರ, ಹೊಸ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಒಪ್ಪಂದ ಅಂತಿಮಗೊಳಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಲಿದೆ.

ರಷ್ಯಾದ ರಕ್ಷಣಾ ಸಂಸ್ಥೆ ರೋಸ್ಟೆಕ್ ಈಗಾಗಲೇ ಹೊಸ ಎಸ್-400 ಒಪ್ಪಂದಕ್ಕಾಗಿ ಭಾರತದೊಂದಿಗೆ ಮಾತುಕತೆ ನಡೆಸಿದ್ದು, ಸಮಯಕ್ಕೆ ಸರಿಯಾಗಿ ವಿತರಣೆ ಮಾಡುವ ಭರವಸೆಯನ್ನೂ ನೀಡಿದೆ ಎನ್ನಲಾಗಿದೆ. ಎಸ್-400 ಕ್ಷಿಪಣಿ ತಯಾರಿಗೆ ಸಂಬಂಧಿಸಿ ಶೇ. 50 ರಷ್ಟು ತಂತ್ರಜ್ಞಾನ ಮಾಹಿತಿಯನ್ನು ಭಾರತಕ್ಕೆ ನೀಡಲು ರಷ್ಯಾ ಸಿದ್ಧವಾಗಿದೆ. ಇದರಿಂದಾಗಿ ಇದರ ನಿರ್ಮಾಣ ಕಾರ್ಯದಲ್ಲಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನಂತಹ ಭಾರತೀಯ ಕಂಪೆನಿಗಳು ಕೈಜೋಡಿಸಲಿದೆ. ಇದರ ಮುಖ್ಯ ಉದ್ದೇಶ ವೆಚ್ಚವನ್ನು ಕಡಿಮೆ ಮಾಡಿ ದೇಶೀಯ ರಕ್ಷಣಾ ಸಾಮರ್ಥ್ಯಗಳನ್ನು ಬೆಳೆಸುವುದಾಗಿದೆ. ಇದು ಭಾರತದ ಸುಧಾರಿತ ರಕ್ಷಣಾ ವ್ಯವಸ್ಥೆಗಳ ಮೇಲೆ ಸ್ವಾವಲಂಬನೆಯ ಗುರಿಯತ್ತ ಒಂದು ಪ್ರಮುಖ ಹೆಜ್ಜೆಯಾಗಲಿದೆ.

error: Content is protected !!