Friday, December 5, 2025

ಭಾರತದತ್ತ ರಷ್ಯನ್ನರ ಚಿತ್ತ: 30 ದಿನ ಉಚಿತ ಇ-ವೀಸಾ ಘೋಷಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ರಷ್ಯಾದ ನಾಗರಿಕರಿಗೆ ಶೀಘ್ರದಲ್ಲೇ 30 ದಿನಗಳ ಅವಧಿಯ ಉಚಿತ ಇ-ಟೂರಿಸ್ಟ್‌ ವೀಸಾ ಮತ್ತು 30 ದಿನಗಳ ಗ್ರೂಪ್‌ ಟೂರಿಸ್ಟ್‌ ವೀಸಾ ಸೌಲಭ್ಯಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ನಿರ್ಧಾರದಿಂದ ತಮಗೆ ಅತ್ಯಂತ ಸಂತೋಷವಾಗಿದೆ ಎಂದು ವ್ಯಕ್ತಪಡಿಸಿದರು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಈ ಕ್ರಮವು ಮುಂದಿನ 30 ದಿನಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಉಭಯ ದೇಶಗಳ ನಾಗರಿಕರಿಗೆ ಇದು ನಿರ್ಣಾಯಕವಾಗಿದೆ ಮತ್ತು ದ್ವಿಪಕ್ಷೀಯ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಲಾಗಿದೆ. ಈ ನಿರ್ಧಾರವು ವಿಶೇಷವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಇ-ಪ್ರವಾಸಿ ವೀಸಾ ಎಂದರೇನು?

ಇ-ಟೂರಿಸ್ಟ್‌ ವೀಸಾ ಎಂಬುದು ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವ ಎಲೆಕ್ಟ್ರಾನಿಕ್ ವೀಸಾ ಆಗಿದೆ. ಈ ಪ್ರಕ್ರಿಯೆಯು ಸಂಪೂರ್ಣ ಡಿಜಿಟಲ್ ಆಗಿರುವುದರಿಂದ, ಪ್ರವಾಸಿಗರು ವೀಸಾ ಕಚೇರಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಮನರಂಜನೆ, ಪ್ರಯಾಣ ಅಥವಾ ಸಂಬಂಧಿಕರನ್ನು ಭೇಟಿ ಮಾಡುವಂತಹ ಉದ್ದೇಶಗಳಿಗಾಗಿ ಈ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ, ಪ್ರವಾಸಿಗರು ಇಮೇಲ್ ಮೂಲಕ ಎಲೆಕ್ಟ್ರಾನಿಕ್ ಪ್ರಯಾಣ ಅಧಿಕಾರವನ್ನು ಸ್ವೀಕರಿಸುತ್ತಾರೆ. ಈ ಅಧಿಕಾರವು ಅವರ ಪಾಸ್‌ಪೋರ್ಟ್‌ಗೆ ಎಲೆಕ್ಟ್ರಾನಿಕ್ ಆಗಿ ಲಿಂಕ್ ಆಗಿರುತ್ತದೆ ಮತ್ತು ಅವರಿಗೆ ಭಾರತ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಸಾಂಪ್ರದಾಯಿಕ ವೀಸಾಗಳಿಗೆ ಹೋಲಿಸಿದರೆ ಈ ಪ್ರಕ್ರಿಯೆಯು ಸರಳ ಮತ್ತು ಹೆಚ್ಚು ವೇಗವಾಗಿರುತ್ತದೆ.

error: Content is protected !!