January20, 2026
Tuesday, January 20, 2026
spot_img

ಶಬರಿಮಲೆ ಚಿನ್ನ ಕಳ್ಳತನ ಕೇಸ್: ಬೆಂಗಳೂರು, ಬಳ್ಳಾರಿಯಲ್ಲಿ ED ದಾಳಿ, ತನಿಖೆ ಮತ್ತಷ್ಟು ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ದೇವಾಲಯದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತೊಂದು ಮಹತ್ವದ ಹಂತಕ್ಕೆ ತಲುಪಿದೆ. ಈಗಾಗಲೇ ವಿಶೇಷ ತನಿಖಾ ತಂಡ (SIT) ಕಾರ್ಯಾಚರಣೆ ನಡೆಸುತ್ತಿರುವ ಈ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ED) ಕೂಡ ಪ್ರವೇಶ ಮಾಡಿದ್ದು, ಬೆಂಗಳೂರು, ಬಳ್ಳಾರಿ ಹಾಗೂ ತಿರುವನಂತಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಇಡಿ ಅಧಿಕಾರಿಗಳು ಹಲವು ಸ್ಥಳಗಳಲ್ಲಿ ಶೋಧ ನಡೆಸಿ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಚಿನ್ನ ಕಳ್ಳತನ ಆರೋಪದಲ್ಲಿ ಬಂಧನದಲ್ಲಿರುವ ಗೋವರ್ಧನ್‌ಗೆ ಸೇರಿರುವ ರೊದ್ದಂ ಜ್ಯುವೆಲರಿ ಅಂಗಡಿ ಹಾಗೂ ನಿವಾಸ, ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನ, ಅಲ್ಲಿನ ಟ್ರಸ್ಟಿಯ ಮನೆ ಸೇರಿದಂತೆ ಹಲವು ಸ್ಥಳಗಳು ದಾಳಿಯ ವ್ಯಾಪ್ತಿಗೆ ಬಂದಿವೆ. ಈ ಹಿಂದೆ ಎಸ್‌ಐಟಿ ಅಧಿಕಾರಿಗಳು ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದರು.

ಈ ಪ್ರಕರಣದಲ್ಲಿ ಈಗಾಗಲೇ ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವ್ ಅವರನ್ನು ಎಸ್‌ಐಟಿ ಬಂಧಿಸಿದೆ. ರಾಜೀವ್ ಅವರು ತಂತ್ರಿ ಉನ್ನಿಕೃಷ್ಣನ್ ಪೊಟ್ಟಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದ್ವಾರಪಾಲಕ ಮೂರ್ತಿಗಳ ಮೇಲಿನ ಚಿನ್ನಕ್ಕೆ ಎಲೆಕ್ಟ್ರೋಪ್ಲೆಟಿಂಗ್ ಮಾಡಲು ಉನ್ನಿಕೃಷ್ಣನ್​ಗೆ ಚಿನ್ನದ ಫಲಕ ಕೊಡಲಾಗಿತ್ತು. ಅಂತೆಯೇ ತಿರುವಾಂಕೂರು ದೇವಸ್ವ ಮಂಡಳಿಯಿಂದ ಚಿನ್ನ ಲೇಪಿತ ತಾಮ್ರದ ಹೊದಿಕೆಯನ್ನು ಉನ್ನಿಕೃಷ್ಣನ್ ಪಡೆದುಕೊಂಡಿದ್ದ. ಆನಂತರ ಉನ್ನಿಕೃಷ್ಣನ್ ಇದನ್ನು ಅನುಮತಿ ಇಲ್ಲದೆ ದಕ್ಷಿಣ ಭಾರತದ ರಾಜ್ಯಗಳ ಹಲವು ದೇವಾಲಯಗಳು ಹಾಗೂ ಮನೆಗಳಿಗೆ ಸಾಗಿಸಿದ್ದ. ಈ ಪೈಕಿ 475 ಗ್ರಾಂ ಚಿನ್ನವನ್ನು ಬಲ್ಲಾರಿಯ ಗೋವರ್ಧನ್ ಅನ್ನೋರಿಗೆ ಮಾರಾಟ ಮಾಡಿದ್ದಾನೆಂಬ ಆರೋಪ ಇದೆ. ಈ ಸಂಬಂಧ ರಾಜೀವ್ ನೀಡಿದ ಅನುಮತಿಯನ್ನು ತನಿಖಾಧಿಕಾರಿಗಳು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

Must Read