ನಮ್ಮ ಬದುಕಿನ ಪಯಣದಲ್ಲಿ ಕೆಲವರು ನಗುತ್ತಾ ನಮ್ಮ ಜೊತೆಯಲ್ಲೇ ಸಾಗುತ್ತಾರೆ. ಆದರೆ ಅವರ ನಗೆಯ ಹಿಂದೆ ಇನ್ನೊಬ್ಬರ ನೋವಿನಿಂದ ಸಂತೋಷಪಡುವ ವಿಚಿತ್ರ ಮನೋಭಾವ ಅಡಗಿರಬಹುದು. ಇಂಥವರನ್ನೇ ‘ಸ್ಯಾಡಿಸ್ಟ್’ ಎಂದು ಕರೆಯುತ್ತಾರೆ. ಅವರು ಶಾರೀರಿಕವಾಗಲಿ, ಮಾನಸಿಕವಾಗಲಿ ಇತರರಿಗೆ ನೋವು ಕೊಟ್ಟು ಅದರಲ್ಲಿ ತೃಪ್ತಿ ಪಡುವವರು. ಇಂಥವರನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ, ನಮ್ಮ ಆತ್ಮವಿಶ್ವಾಸ, ಮನಸ್ಸಿನ ಶಾಂತಿ ಎರಡನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ.
ಸ್ಯಾಡಿಸ್ಟ್ ವ್ಯಕ್ತಿಗಳು ಹೀಗಿರ್ತಾರೆ ನೋಡಿ:
ಯಾರಾದರೂ ಕಷ್ಟದಲ್ಲಿದ್ದಾಗ ಸಹಾನುಭೂತಿ ತೋರಿಸುವ ಬದಲು ವ್ಯಂಗ್ಯವಾಗಿ ಮಾತನಾಡುವುದು ಅಥವಾ ನಗುವುದು ಇವರ ಸಾಮಾನ್ಯ ಗುಣ.
ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಮಾಡಿ, ಪದೇಪದೇ ಟೀಕಿಸಿ ಎದುರಾಳಿಯನ್ನು ಗೊಂದಲಕ್ಕೆ ತಳ್ಳುತ್ತಾರೆ.
ನಿಮ್ಮ ನಿರ್ಧಾರ, ಭಾವನೆ, ಸಂಬಂಧಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಾರೆ. “ನಾನು ಹೇಳಿದಂತೆ ಮಾಡಬೇಕು” ಎನ್ನುವ ಧೋರಣೆ ಸ್ಪಷ್ಟವಾಗಿರುತ್ತದೆ.
ತಾವು ನೋವು ಕೊಟ್ಟರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ತಪ್ಪನ್ನು ನಿಮ್ಮ ಮೇಲೆಯೇ ಹಾಕುತ್ತಾರೆ.
ನೀವು ಯಾರ ಮುಂದೆ ತೆರೆಯಾಗಿ ಮಾತನಾಡಿದರೆ, ಅದನ್ನೇ ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಉಪಯೋಗಿಸುತ್ತಾರೆ.
ಇಂಥವರಿಂದ ದೂರ ಇರೋದೇ ಯಾಕೆ ಒಳ್ಳೆದು?
ಸ್ಯಾಡಿಸ್ಟ್ ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರೆ ಆತಂಕ, ಆತ್ಮವಿಶ್ವಾಸ ಕೊರತೆ, ನಕಾರಾತ್ಮಕ ಯೋಚನೆಗಳು ಹೆಚ್ಚುತ್ತವೆ. ಅವರಿಂದ ದೂರ ಉಳಿಯುವುದು ಸ್ವಾರ್ಥವಲ್ಲ, ಸ್ವ-ರಕ್ಷಣೆ.
ಏನು ಮಾಡಬೇಕು?
ಸ್ಪಷ್ಟ ಗಡಿ ಹಾಕಿ, ಅನಗತ್ಯವಾಗಿ ನಿಮ್ಮ ಜೀವನದ ವಿವರಗಳನ್ನು ಹಂಚಿಕೊಳ್ಳಬೇಡಿ. ಅಗತ್ಯವಿದ್ದರೆ “ನೋ” ಹೇಳುವುದನ್ನು ಕಲಿಯಿರಿ. ನಿಮ್ಮ ಮನಸ್ಸಿಗೆ ಶಾಂತಿ ನೀಡುವ ಜನರನ್ನೇ ನಿಮ್ಮ ವಲಯದಲ್ಲಿ ಇಟ್ಟುಕೊಳ್ಳಿ. ನಿಮ್ಮ ಮಾನಸಿಕ ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಅಲ್ಲ.


