Sunday, December 21, 2025

ವಿಧಾನಸಭೆ ಬೆನ್ನಲ್ಲೇ ಪಾಲಿಕೆಗಳಲ್ಲೂ ಕೇಸರಿ ಕಂಪು: ಸ್ಥಳೀಯ ಸಂಸ್ಥೆಗಳಲ್ಲೂ ವಿಪಕ್ಷಗಳ ಆಟ ನಗಣ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಒಟ್ಟು 246 ನಗರ ಪಾಲಿಕೆ ಹಾಗೂ 42 ನಗರ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿ ಜಯಭೇರಿ ಬಾರಿಸಿದೆ.

ಇಂದು ನಡೆಯುತ್ತಿರುವ ಮತ ಎಣಿಕೆಯ ಅಂಕಿಅಂಶಗಳ ಪ್ರಕಾರ, ಒಟ್ಟು 288 ಸ್ಥಳೀಯ ಸಂಸ್ಥೆಗಳ ಪೈಕಿ 214 ಸಂಸ್ಥೆಗಳಲ್ಲಿ ಮಹಾಯುತಿ ಮುನ್ನಡೆ ಸಾಧಿಸಿದ್ದರೆ, ವಿಪಕ್ಷಗಳ ಮಹಾ ವಿಕಾಸ್ ಆಘಾಡಿ ಕೇವಲ 52 ಕಡೆಗಳಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.

ಒಟ್ಟು 6,859 ಸ್ಥಾನಗಳ ಪೈಕಿ ಬರೋಬ್ಬರಿ 3,120 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 600 ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 200 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಉದ್ಧವ್ ಠಾಕ್ರೆ ಬಣ (145), ಕಾಂಗ್ರೆಸ್ (105) ಮತ್ತು ಶರದ್ ಪವಾರ್ ಬಣ (122) ಸ್ಥಾನಗಳಲ್ಲಿ ಮಾತ್ರ ಸೀಮಿತವಾಗಿವೆ.

ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಮತ್ತು ಮಹಿಳಾ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಈ ಆಡಳಿತ ವಿರೋಧಿ ಅಲೆ ತಮಗೆ ವರವಾಗಲಿದೆ ಎಂದು ‘ಮಹಾ ವಿಕಾಸ್ ಆಘಾಡಿ’ ನಿರೀಕ್ಷಿಸಿತ್ತು. ಆದರೆ, ಮತದಾರರು ಮತ್ತೊಮ್ಮೆ ಆಡಳಿತಾರೂಢ ಮೈತ್ರಿಕೂಟದ ಮೇಲೆಯೇ ವಿಶ್ವಾಸ ವ್ಯಕ್ತಪಡಿಸುವ ಮೂಲಕ ವಿಪಕ್ಷಗಳ ಹೋರಾಟಕ್ಕೆ ತಣ್ಣೀರೆರಚಿದ್ದಾರೆ.

ಡಿಸೆಂಬರ್ 2 ಮತ್ತು 20 ರಂದು ನಡೆದ ಎರಡು ಹಂತದ ಮತದಾನವು ಮಹಾರಾಷ್ಟ್ರದ ರಾಜಕೀಯ ಭವಿಷ್ಯವನ್ನು ಮತ್ತೊಮ್ಮೆ ಮಹಾಯುತಿಯ ಪರವಾಗಿ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಗೆಲುವು ಸರ್ಕಾರದ ಜನಪ್ರಿಯ ಯೋಜನೆಗಳಿಗೆ ಸಿಕ್ಕ ಜನಮನ್ನಣೆ ಎಂದು ವಿಶ್ಲೇಷಿಸಲಾಗುತ್ತಿದೆ.

error: Content is protected !!