ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ರಾಜ್ಯದ ಸರ್ಕಾರಿ ವಲಯದ ವೇತನ ಶ್ರೇಣಿಯು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹೈದರಾಬಾದ್ ನಗರದ ಸ್ವಚ್ಛತೆಯನ್ನು ಕಾಪಾಡುವ ಹಿರಿಯ ನೈರ್ಮಲ್ಯ ಕಾರ್ಮಿಕರು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನೂ ಮೀರಿಸುವಂತಹ ವೇತನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ದರ್ಜೆ-4ರ ನೈರ್ಮಲ್ಯ ಕಾರ್ಮಿಕರು ಪ್ರತಿ ತಿಂಗಳು ಸುಮಾರು 2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇನ್ನು ಸಾಮಾನ್ಯ ನೈರ್ಮಲ್ಯ ಕಾರ್ಮಿಕರ ಸರಾಸರಿ ವೇತನ 70 ಸಾವಿರ ರೂಪಾಯಿಗಳಷ್ಟಿದ್ದರೆ, ಹೊಸದಾಗಿ ಸೇರಿದವರು 28 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.
ವಿದ್ಯುತ್ ಉತ್ಪಾದನಾ ಮತ್ತು ಪ್ರಸರಣ ನಿಗಮಗಳಾದ TSGENCO, TRANSCO ಮತ್ತು DISCOMಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಎಂಜಿನಿಯರ್‌ಗಳ ಮಾಸಿಕ ವೇತನ ಬರೋಬ್ಬರಿ 7 ಲಕ್ಷ ರೂಪಾಯಿ ತಲುಪಿದೆ. ಇದು ರಾಜ್ಯದ ಅತಿ ಹೆಚ್ಚು ವೇತನ ಪಡೆಯುವ ಹುದ್ದೆಗಳ ಪಟ್ಟಿಯಲ್ಲಿದೆ.
2014ರಲ್ಲಿ ರಾಜ್ಯ ರಚನೆಯಾದಾಗ ಇದ್ದ ವೇತನ ಮತ್ತು ಪಿಂಚಣಿ ವೆಚ್ಚಕ್ಕೆ ಹೋಲಿಸಿದರೆ, ಇಂದು ಅದು ನಾಲ್ಕು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ತೆಲಂಗಾಣ ಸರ್ಕಾರವು ಪ್ರತಿ ತಿಂಗಳು ಸರಿಸುಮಾರು 6,000 ಕೋಟಿ ರೂಪಾಯಿಗಳನ್ನು ಕೇವಲ ವೇತನ ಮತ್ತು ಪಿಂಚಣಿಗಾಗಿ ಮೀಸಲಿಡುತ್ತಿದೆ.
ಇತ್ತೀಚಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯ ಪ್ರಕಾರ, ರಾಜ್ಯದ ಒಟ್ಟು ಆದಾಯದ ಸುಮಾರು 45% ರಷ್ಟು ಭಾಗವು ಸಂಬಳ, ಪಿಂಚಣಿ ಮತ್ತು ಸಾಲದ ಬಡ್ಡಿ ಪಾವತಿಸಲು ಬಳಕೆಯಾಗುತ್ತಿದೆ. ಹೆಚ್ಚಿನ ಉದ್ಯೋಗಿಗಳು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿದ್ದರೂ, ಬಜೆಟ್ ಮೇಲಿನ ಈ ಹೊರೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.



