Friday, January 9, 2026

ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಡಾ. ಎ. ಚಂದ್ರಶೇಖರ್ ಉಡುಪ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯ ಕುಂದಾಪುರದ ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥೆಯ ನಿರ್ದೇಶಕ, ವೈದ್ಯ ಡಾ. ಎ.ಚಂದ್ರಶೇಖರ್ ಉಡುಪ (74) ಹೃದಯಘಾತದಿಂದ ಜ.7ರಂದು ನಿಧನ ಹೊಂದಿದರು.

ಮೃತರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಮ್ಯಾನೇಜಿಂಗ್ ಡೈರಕ್ಟರ್ ವಿವೇಕ್ ಉಡುಪ ಸೇರಿದಂತೆ, ಪತ್ನಿ, ಪುತ್ರಿ, ಸೊಸೆ, ಅಳಿಯ ಹಾಗೂ ಲಕ್ಷಾಂತರ ಅನುಯಾಯಿಗಳನ್ನು ಅಗಲಿದ್ದಾರೆ.

ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟೋದ್ಧಾರದ ಕನಸನ್ನು ನನಸಾಗಿಸುವ ಸಂಕಲ್ಪದೊಂದಿಗೆ ನಾಲ್ವತ್ತು ವರ್ಷದ ಹಿಂದೆ ಡಿವೈನ್ ಪಾರ್ಕ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು ಹಾಗೂ ಈ ಸಂಸ್ಥೆಯ ಮೂಲಕ ಆರೋಗ್ಯ ಮತ್ತು ಅಧ್ಯಾತ್ಮದ ಚಿಂತನೆ, ಸಾಮಾಜಿಕ, ಧಾರ್ಮಿಕ ಸೇವೆಯ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವೈದ್ಯಕೀಯ ವೃತ್ತಿಯ ಜತೆಗೆ ಡಿವೈನ್ ಪಾರ್ಕ್ ಮೂಲಕ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದು ನಾಡಿನಾದ್ಯಂತ ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದರು. ಡಿವೈನ್ ಪಾರ್ಕ್‌ನ ಸಹಸಂಸ್ಥೆಯಾಗಿ ಎಸ್.ಎಚ್.ಆರ್.ಎಫ್ (ಯೋಗಬನ) ಎನ್ನುವ ಸಂಸ್ಥೆ ಹಾಗೂ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಮೂಡುಗಿಳಿಯಾರಿನಲ್ಲಿ ಸ್ಥಾಪಿಸಿದ್ದು ಇದು ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದಿತ್ತು.

ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಸಾಲಿಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದರು. 950ಕ್ಕೂ ಹೆಚ್ಚು ಗ್ರಂಥಗಳನ್ನು 9 ಭಾಷೆಗಳಲ್ಲಿ ಪ್ರಕಟಿಸಿ, 1200 ಭಜನೆಗಳನ್ನು ಸ್ವಯಂ ರಚಿಸಿ ಲೋಕಾರ್ಪಣೆಗೊಳಿಸಿದ್ದರು .

ಮೂಡುಗಿಳಿಯಾರು ಯೋಗಬನದಲ್ಲಿ ನಿರ್ಮಿಸಿದ 35 ಅಡಿ ಎತ್ತರದ ವಿವೇಕಾನಂದ ಪ್ರತಿಮೆ ಜಗತ್ತಿನಲ್ಲೇ ವಿಶಿಷ್ಠವಾಗಿದೆ. ಧಾರ್ಮಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ಸಂಧೇಶ ಸಾರುವ ಸಲುವಾಗಿ ಇವರು ದೇಶ, ವಿದೇಶಗಳಲ್ಲಿ 150ಕ್ಕೂ ಹೆಚ್ಚು ಕಡೆ ವಿವೇಕ ಜಾಗೃತ ಬಳಗವನ್ನು ಹುಟ್ಟುಹಾಕಿದ್ದರು.

error: Content is protected !!