ಹೊಸದಿಗಂತ ಡಿಜಿಟಲ್ ಡೆಸ್ಕ್
2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಆಟದ ಆಯಸ್ಸು ಸೂಪರ್-8 ಹಂತಕ್ಕೇ ಕೊನೆಗೊಂಡಿದೆ. ಗ್ರೂಪ್-2ರಲ್ಲಿ ಕೇವಲ ಒಂದು ಜಯದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಪಾಕ್, ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಮೈದಾನದಲ್ಲಿ ನಿರಾಸೆ ಅನುಭವಿಸಿದರೂ, ಆರ್ಥಿಕವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿಯಿಂದ ಭರ್ಜರಿ ಮೊತ್ತ ಲಭ್ಯವಾಗಲಿದೆ.
ಐಸಿಸಿ ಈ ಬಾರಿಯ ವಿಶ್ವಕಪ್‌ಗಾಗಿ ಸುಮಾರು 102 ಕೋಟಿ ರೂ.ಗಳ ಒಟ್ಟು ಬಹುಮಾನದ ಮೊತ್ತವನ್ನು ಮೀಸಲಿರಿಸಿದೆ. ಟೂರ್ನಿಯಲ್ಲಿ 5 ರಿಂದ 8 ನೇ ಸ್ಥಾನದೊಳಗೆ ಅಭಿಯಾನ ಮುಗಿಸಿರುವ ಪಾಕಿಸ್ತಾನಕ್ಕೆ ಸರಿಸುಮಾರು 3.5 ಕೋಟಿ ರೂ. ನಿಗದಿತ ಬಹುಮಾನವಾಗಿ ಸಿಗಲಿದೆ.
ಇದರ ಹೊರತಾಗಿ, ಪ್ರದರ್ಶನದ ಆಧಾರದ ಮೇಲೆ ಹೆಚ್ಚುವರಿ ಹಣವೂ ತಂಡದ ಖಾತೆ ಸೇರಲಿದೆ.
ಸೆಮಿಫೈನಲ್ ಮತ್ತು ಫೈನಲ್ ಹೊರತುಪಡಿಸಿ, ಗುಂಪು ಹಂತ ಹಾಗೂ ಸೂಪರ್-8ರಲ್ಲಿ ಗೆದ್ದ ಪ್ರತಿ ಪಂದ್ಯಕ್ಕೆ ಐಸಿಸಿ ಸುಮಾರು 2.8 ಕೋಟಿ ರೂ. ನೀಡುತ್ತದೆ. ಪಾಕಿಸ್ತಾನ ಗುಂಪು ಹಂತದಲ್ಲಿ 3 ಮತ್ತು ಸೂಪರ್-8ರಲ್ಲಿ 1 ಸೇರಿದಂತೆ ಒಟ್ಟು 4 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಈ ನಾಲ್ಕು ಗೆಲುವುಗಳಿಂದ ತಂಡಕ್ಕೆ ಅಂದಾಜು 11.2 ಕೋಟಿ ರೂ. ಹರಿದುಬರಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿಗದಿತ ಬಹುಮಾನ ಮತ್ತು ಗೆಲುವಿನ ಬೋನಸ್ ಸೇರಿ ಪಾಕಿಸ್ತಾನ ತಂಡವು ಸರಿಸುಮಾರು 14.7 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಪಡೆಯಲಿದೆ.



