ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಧೂಳೀಪಟ ಮಾಡಿದ ಡೆಸರ್ಟ್ ವೈಪರ್ಸ್ ತಂಡವು ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ನಾಯಕ ಕೀರನ್ ಪೊಲಾರ್ಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ತಂಡಕ್ಕೆ ನಾಯಕ ಸ್ಯಾಮ್ ಕರನ್ ಆಸರೆಯಾದರು. ಜವಾಬ್ದಾರಿಯುತ ಆಟವಾಡಿದ ಕರನ್ ಕೇವಲ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಅಮೋಘ ಸಿಕ್ಸರ್‌ಗಳ ನೆರವಿನಿಂದ ಅಜೇಯ 74 ರನ್ ಸಿಡಿಸಿದರು. ಈ ಭರ್ಜರಿ ಅರ್ಧಶತಕದ ನೆರವಿನಿಂದ ವೈಪರ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
183 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು ಡೆಸರ್ಟ್ ವೈಪರ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡ ಎಂಐ ಎಮಿರೇಟ್ಸ್ ಕೇವಲ 18.3 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಅಂತಿಮವಾಗಿ 46 ರನ್‌ಗಳ ಭರ್ಜರಿ ಜಯ ಸಾಧಿಸಿದ ಡೆಸರ್ಟ್ ವೈಪರ್ಸ್, ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಇತಿಹಾಸ ಬರೆಯಿತು.

