March 17, 2026
Tuesday, March 17, 2026
spot_img

ಹೆತ್ತವರಿಗೂ ದತ್ತು ಪಡೆದವರಿಗೂ ಒಂದೇ ನಿಯಮ: ತಾಯ್ತನಕ್ಕೆ ಸಿಕ್ಕಿತು ಸಾಂವಿಧಾನಿಕ ಗೌರವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದತ್ತು ಪಡೆಯುವ ತಾಯಂದಿರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಒಂದು ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಮಗುವನ್ನು ದತ್ತು ಪಡೆಯುವ ಮಹಿಳೆಯರಿಗೆ ನೀಡಲಾಗುವ ರಜೆಯ ನಿಯಮಗಳಲ್ಲಿ ಇದ್ದ ಅಸಮಾನತೆಯನ್ನು ಕೋರ್ಟ್ ಇದೀಗ ದೂರ ಮಾಡಿದೆ.

ಈ ಹಿಂದೆ 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದರೆ ಮಾತ್ರ ಹೆರಿಗೆ ರಜೆ ಸಿಗುತ್ತಿತ್ತು. ಈಗ ಮಗುವಿನ ವಯಸ್ಸು ಎಷ್ಟೇ ಇರಲಿ, ದತ್ತು ಪಡೆದ ದಿನಾಂಕದಿಂದ ತಾಯಿಗೆ 12 ವಾರಗಳ (3 ತಿಂಗಳು) ರಜೆ ಕಡ್ಡಾಯವಾಗಿ ಸಿಗಲಿದೆ.

ದತ್ತು ಪಡೆದ ಮಗು ಮತ್ತು ಹೆತ್ತ ಮಗುವಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇದು ಕೇವಲ ರಜೆಯಲ್ಲ, ಮಹಿಳೆಯ ‘ಮಾನವ ಹಕ್ಕು’ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರ ಪೀಠ ಅಭಿಪ್ರಾಯಪಟ್ಟಿದೆ.

ಮಗು ದೊಡ್ಡದಿರಲಿ ಅಥವಾ ಸಣ್ಣದಿರಲಿ, ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ತಾಯಿಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂಬುದನ್ನು ನ್ಯಾಯಾಲಯ ಎತ್ತಿ ತೋರಿಸಿದೆ.

3 ತಿಂಗಳ ಮಿತಿಯನ್ನು ಹೇರಿದ್ದ ಹಳೆಯ ಕಾನೂನು ನಿಬಂಧನೆಯನ್ನು ಸುಪ್ರೀಂ ಕೋರ್ಟ್ ‘ಅಸಂವಿಧಾನಿಕ’ ಎಂದು ಘೋಷಿಸಿ ರದ್ದುಗೊಳಿಸಿದೆ.

ತಾಯಂದಿರಿಗೆ ರಜೆ ಖಚಿತಪಡಿಸಿದ ನ್ಯಾಯಾಲಯ, ಪಿತೃತ್ವ ರಜೆಯ ವಿಷಯವನ್ನು ಆಯಾ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಈ ಬಗ್ಗೆ ಹೊಸ ನಿಯಮಗಳನ್ನು ರೂಪಿಸುವ ಅಥವಾ ಬದಲಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !