ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸುವುದು ಖಚಿತವಾಗಿದೆ.
ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್ಡಿಪಿ) ಅಧ್ಯಕ್ಷೀಯ ಚುನಾವಣೆಯಲ್ಲಿ ಆಂತರಿಕ ವ್ಯವಹಾರಗಳ ಮಾಜಿ ಸಚಿವೆ ಸನೇ ತಕೈಚಿ ಅವರು ಗೆಲುವು ಸಾಧಿಸಿದರು. ಈ ಮೂಲಕ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ.
64 ವರ್ಷದ ತಕೈಚಿ ಅವರು ಎಲ್ಡಿಪಿಯ ಖಟ್ಟರ್ ಸಂಪ್ರದಾಯವಾದಿ ನಾಯಕಿ. ಪಕ್ಷದ ಆಂತರಿಕ ಚುನಾವಣೆಯಲ್ಲಿ ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚಮಿ ಅವರ ಪುತ್ರ ಮತ್ತು ಪ್ರಸ್ತುತ ಕೃಷಿ ಸಚಿವರಾಗಿರುವ 44 ವರ್ಷದ ಶಿಂಜಿರೊ ಕೊಯ್ಚಮಿ ಅವರನ್ನು ಸೋಲಿಸಿ ಪಕ್ಷದ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ಮಾಜಿ ಪ್ರಧಾನಿ ಶಿಗೇರು ಇಶಿಬಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷದಲ್ಲಿ ಮುಂದಿನ ಪ್ರಧಾನಿ ಆಯ್ಕೆಗೆ ಪ್ರಕ್ರಿಯೆ ಶುರುವಾಗಿತ್ತು. ಸರ್ಕಾರದ ಅವಧಿ 2027ರ ವರೆಗೆ ಇದೆ. ಹೀಗಾಗಿ, ಪಕ್ಷದ ಹೊಸ ಅಧ್ಯಕ್ಷರಾಗಿ ತಕೈಚಿ ಈ ತಿಂಗಳ ಕೊನೆಯಲ್ಲಿ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ದಟ್ಟವಾಗಿದೆ.
ಎಲ್ಡಿಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸನೇ ತಕೈಚಿ ಅವರು, ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ದೇಶದ ಇತಿಹಾಸದಲ್ಲಿಯೇ ಮೊದಲ ಮಹಿಳಾ ಪ್ರಧಾನಿ ಎಂಬ ಖ್ಯಾತಿ ಗಳಿಸಲಿದ್ದಾರೆ.