ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟವು (ಚಿಮುಲ್) ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 1 ರೂಪಾಯಿ ಹೆಚ್ಚಳ ಮಾಡಿದೆ. ಹೊಸ ವರ್ಷ ಹಾಗೂ ಮುಂಬರುವ ಮಕರ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಹಿಂದೆ ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 35.40 ರೂ. ಪಾವತಿಸುತ್ತಿತ್ತು. ಇಂದಿನ ದರ ಏರಿಕೆಯ ನಂತರ ಅದು 36.40 ರೂ. ಗೆ ಏರಿಕೆಯಾಗಿದೆ. ಇದರ ಜೊತೆಗೆ ಸರ್ಕಾರದಿಂದ ನೀಡಲಾಗುವ 5 ರೂ. ಪ್ರೋತ್ಸಾಹಧನವನ್ನೂ ಸೇರಿಸಿದರೆ, ಜಿಲ್ಲೆಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಒಟ್ಟು 41.40 ರೂ. ಲಭ್ಯವಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚಿಮುಲ್ ಆಡಳಿತಾಧಿಕಾರಿ ಅಶ್ವಿನ್ ತಿಳಿಸಿದ್ದಾರೆ. ಮುಂದಿನ ಮೂರು ತಿಂಗಳ ಅವಧಿಗೆ ಈ ಹೆಚ್ಚುವರಿ ದರ ಅನ್ವಯವಾಗಲಿದ್ದು, ಇದರಿಂದ ಒಕ್ಕೂಟದ ಮೇಲೆ ಅಂದಾಜು 4.5 ಕೋಟಿ ರೂ. ಗಳ ಆರ್ಥಿಕ ಹೊರೆ ಬೀಳಲಿದೆ. ಆದರೂ, ರೈತರ ಹಿತ ಕಾಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಟ್ಟು ಸ್ವತಂತ್ರವಾಗಿ ಕಾರ್ಯಾರಂಭ ಮಾಡಿದ ಕೇವಲ 1 ವರ್ಷ 3 ತಿಂಗಳಲ್ಲೇ ‘ಚಿಮುಲ್’ ಲಾಭದಾಯಕವಾಗಿ ಮುನ್ನಡೆಯುತ್ತಿರುವುದು ವಿಶೇಷ. ಕಳೆದ ವರ್ಷವೂ ಸಹ ಒಕ್ಕೂಟವು 1 ರೂ. ದರ ಹೆಚ್ಚಳ ಮಾಡಿ ರೈತರಿಗೆ ನೆರವಾಗಿತ್ತು.
ಒಕ್ಕೂಟದ ಈ ನಿರ್ಧಾರಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಸ್ತುತ ಜಾನುವಾರುಗಳ ಮೇವಿನ ದರ ಗಗನಕ್ಕೇರಿರುವುದರಿಂದ, ಕನಿಷ್ಠ 5 ರೂ. ಹೆಚ್ಚಳ ಮಾಡಿದ್ದರೆ ಹೈನುಗಾರಿಕೆ ಇನ್ನೂ ಹೆಚ್ಚು ಸುಸ್ಥಿರವಾಗುತ್ತಿತ್ತು ಎಂಬ ಅಭಿಪ್ರಾಯವನ್ನೂ ರೈತರು ವ್ಯಕ್ತಪಡಿಸಿದ್ದಾರೆ.

