ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಮೂರು ವರ್ಷಗಳಲ್ಲಿ, ಹಿಂದಿನ ಪತ್ನಿಯರಿಗೆ ವಿಚ್ಛೇದನ ನೀಡದೆ ಮೂರು ಮದುವೆಯಾಗಿರುವ ‘ಮಹಾಶಯ’ನೊಬ್ಬ ಈಗ ಕಂಬಿ ಎಣಿಸುತ್ತಿದ್ದಾನೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಪಿಂಟು ಬರ್ನ್‌ವಾಲ್ ಎಂಬಾತನೇ ಈ ವಿಚಿತ್ರ ಪ್ರಕರಣದ ನಾಯಕ. ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಹಿಂಸೆಯ ಆರೋಪದ ಮೇಲೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಪಿಂಟು ಕಳೆದ ಮೂರು ವರ್ಷಗಳಲ್ಲಿ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಮೊದಲ ಪತ್ನಿ ಖುಷ್ಬೂ ಅವರ ದೂರಿನ ಪ್ರಕಾರ, ಮದುವೆಯಾದ ಕೆಲವು ದಿನಗಳಲ್ಲೇ ಪಿಂಟು ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದ. ಏಪ್ರಿಲ್ 18, 2024 ರಂದು ಪಿಂಟು ತನಗೆ ತಿಳಿಸದೆ ಎರಡನೇ ಮದುವೆಯಾದ ವಿಚಾರ ಆಕೆಗೆ ತಿಳಿಯಿತು. ಅಚ್ಚರಿಯೆಂದರೆ, ಎರಡನೇ ಪತ್ನಿಗೆ 10 ತಿಂಗಳ ಮಗು ಇರುವಾಗಲೇ, ಪಿಂಟು ಮೂರನೇ ಮದುವೆಯಾಗಿದ್ದು ಆಕೆಗೆ ಈಗ ಒಂದು ತಿಂಗಳ ಮಗುವಿದೆ.
ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಪಿಂಟು, ತಾನು ಮೂರು ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆದರೆ ಅದಕ್ಕೆ ಆತ ನೀಡಿರುವ ಕಾರಣ ಮಾತ್ರ ವಿಚಿತ್ರವಾಗಿದೆ:
“ನನ್ನ ತಾಯಿಗೆ 60 ವರ್ಷ, ಅವರಿಗೆ ಅನಾರೋಗ್ಯವಿದೆ. ಮನೆಯಲ್ಲಿ ಅವರಿಗೆ ಅಡುಗೆ ಮಾಡಿಕೊಡಲು ಯಾರೂ ಇರಲಿಲ್ಲ, ನನಗೂ ಅಡುಗೆ ಬರಲ್ಲ. ಅದಕ್ಕಾಗಿಯೇ ಮದುವೆಯಾದೆ” ಎಂದು ಸಮರ್ಥಿಸಿಕೊಂಡಿದ್ದಾನೆ.
ಮೊದಲ ಪತ್ನಿ ಖುಷ್ಬೂ ತನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಳು ಎಂದು ಪಿಂಟು ಆರೋಪಿಸಿದ್ದಾನೆ. ಅಲ್ಲದೆ, ವರದಕ್ಷಿಣೆ ಹೆಸರಿನಲ್ಲಿ ತಾವು ಒಂದು ರೂಪಾಯಿಯನ್ನೂ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾನೆ.
ಸದ್ಯ ಇಬ್ಬರು ಪತ್ನಿಯರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಪಿಂಟು ಬರ್ನ್‌ವಾಲ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

