ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರಿಗೆ ಅಭಿಮಾನಿಗಳು “ಮುಂದಿನ ಸಿಎಂ ಸಾಹುಕಾರ್” ಎಂದು ಘೋಷಣೆ ಕೂಗುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.
ಅಭಿಮಾನಿಗಳ ಘೋಷಣೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಜನರು ಅಭಿಮಾನದಿಂದ ಘೋಷಣೆ ಕೂಗುತ್ತಿದ್ದಾರೆ. ಆದರೆ ನಾನು ಈ ಅವಧಿಗೆ ಸಿಎಂ ಆಗುತ್ತೇನೆ ಎಂದು ಹೇಳುತ್ತಿಲ್ಲ. 2028ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ,” ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಪ್ರಸ್ತುತ ನಡೆಯುತ್ತಿರುವ ಸಿಎಂ ಬದಲಾವಣೆ ರೇಸ್‌ನಿಂದ ತಾವು ಹೊರಗಿರುವುದಾಗಿ ಸೂಚನೆ ನೀಡಿದ್ದಾರೆ.
“ಈಗಾಗಲೇ ಅಸ್ಸಾಂ ಚುನಾವಣೆ ಹಾಗೂ ಗ್ರೇಟರ್ ಬೆಂಗಳೂರು ಚುನಾವಣೆಗಳು ಸಮೀಪಿಸುತ್ತಿವೆ. ಇಂತಹ ಸಮಯದಲ್ಲಿ ಸಿಎಂ ಬದಲಾವಣೆ ಚರ್ಚೆ ಅನಗತ್ಯ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಆಡಳಿತಾತ್ಮಕ ಕೆಲಸಗಳಿಗಾಗಿ ದೆಹಲಿಗೆ ಹೋಗುತ್ತಿರುತ್ತಾರೆ. ಏನೇ ಆದರೂ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ,” ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಪಾಂಡೋಮಟ್ಟಿ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರ ಕ್ರೇಜ್ ಎದ್ದು ಕಾಣುತ್ತಿತ್ತು. ಅಭಿಮಾನಿಗಳು ಅವರ ಫೋಟೋ ಇರುವ ಟೀ-ಶರ್ಟ್‌ಗಳನ್ನು ಧರಿಸಿ, “ಮುಂದಿನ ಸಿಎಂ ಸಾಹುಕಾರ್” ಎಂಬ ಹ್ಯಾಂಡ್ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಜೈಕಾರ ಹಾಕಿದ್ದು ವಿಶೇಷವಾಗಿತ್ತು.


