Thursday, December 18, 2025

ಸತೀಶ್ ಜಾರಕಿಹೊಳಿ ‘ಮಾಸ್ಟರ್ ಪ್ಲಾನ್’: ಶಾಸಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯ್ತು ಔತಣಕೂಟ!

ಹೊಸದಿಗಂತ ಬೆಳಗಾವಿ:

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಎಸ್‌ಸಿ/ಎಸ್‌ಟಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆಯೋಜಿಸಿದ್ದ ‘ಡಿನ್ನರ್ ಮೀಟಿಂಗ್’ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಕೆಲ ದಿನಗಳ ಹಿಂದಷ್ಟೇ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತರ ಮೂಲಕ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಆ ಸಭೆಯಲ್ಲಿ ಕೇವಲ ಡಿಕೆಶಿ ಬೆಂಬಲಿಗರು ಮಾತ್ರ ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯ ಬಣದ ಗೈರುಹಾಜರಿ ಎದ್ದು ಕಾಣುತ್ತಿತ್ತು. ಇದಕ್ಕೆ ಪ್ರತಿಯಾಗಿ ಎಂಬಂತೆ ಈಗ ಸತೀಶ್ ಜಾರಕಿಹೊಳಿ ಅವರು ಅಹಿಂದ ಹಾಗೂ ದಲಿತ ಶಾಸಕರನ್ನು ಒಗ್ಗೂಡಿಸಿರುವುದು ಹೊಸ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರಿಗೆ ಈ ಹಿಂದೆ ಯತೀಂದ್ರ ಸಿದ್ದರಾಮಯ್ಯ ಅವರು ಬಹಿರಂಗ ಬೆಂಬಲ ಸೂಚಿಸಿದ್ದರು. ಈಗ ದಲಿತ ಮತ್ತು ಪಂಗಡದ ಶಾಸಕರ ವಿಶ್ವಾಸ ಗಳಿಸಲು ಸತೀಶ್ ಮುಂದಾಗಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಅಧಿವೇಶನದ ಬಿಡುವಿಲ್ಲದ ವೇಳೆಯಲ್ಲೂ ನಡೆಯುತ್ತಿರುವ ಈ ಸರಣಿ ಔತಣಕೂಟಗಳು ಕೇವಲ ಸೌಹಾರ್ದಯುತ ಭೇಟಿಗಳಲ್ಲ, ಬದಲಿಗೆ ಭವಿಷ್ಯದ ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಬಲ ಪ್ರದರ್ಶಿಸುವ ತಂತ್ರಗಾರಿಕೆ ಎಂಬ ಮಾತುಗಳು ಕೇಳಿಬರುತ್ತಿವೆ.

error: Content is protected !!