Tuesday, October 14, 2025

ಸೌದಿ – ಪಾಕಿಸ್ತಾನ ರಕ್ಷಣಾ ಒಪ್ಪಂದ: ಭಾರತ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸೌದಿ ಅರೇಬಿಯಾ ಭೇಟಿಯ ವೇಳೆ, ರಿಯಾದ್ ಮತ್ತು ಇಸ್ಲಾಮಾಬಾದ್ ನಡುವೆ ಮಹತ್ವದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಪ್ರಕಾರ, “ಯಾರ ಮೇಲಾದರೂ ದಾಳಿ ನಡೆದರೆ ಅದನ್ನು ಇಬ್ಬರ ಮೇಲಿನ ಆಕ್ರಮಣವೆಂದು ಪರಿಗಣಿಸಲಾಗುವುದು” ಎಂಬ ಅಂಶ ಮುಖ್ಯವಾಗಿ ಉಲ್ಲೇಖವಾಗಿದೆ.

ಈ ಬೆಳವಣಿಗೆಗೆ ಭಾರತ ಪ್ರತಿಕ್ರಿಯಿಸಿದ್ದು, ಸೌದಿ–ಪಾಕಿಸ್ತಾನ ಒಪ್ಪಂದವು ಪ್ರಾದೇಶಿಕ ಹಾಗೂ ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದೆಂಬ ಅಂಶವನ್ನು ನಾವು ಗಮನಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ದೇಶದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಹಾಗೂ ಸಮಗ್ರ ಭದ್ರತೆಯನ್ನು ಖಚಿತಪಡಿಸಲು ಭಾರತ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪಾಕಿಸ್ತಾನ ಪ್ರಧಾನಿ ಷರೀಫ್ ರಿಯಾದ್‌ಗೆ ಭೇಟಿ ನೀಡಿದರು. ಅಲ್–ಯಮಾಮಾ ಅರಮನೆಯಲ್ಲಿ ನಡೆದ ಮಾತುಕತೆಯ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಸುಮಾರು ಎಂಟು ದಶಕಗಳಿಂದ ಆಪ್ತ ಪಾಲುದಾರಿಕೆ ಹೊಂದಿದ್ದು, ಇಸ್ಲಾಮಿಕ್ ರಾಷ್ಟ್ರಗಳ ಒಗ್ಗಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದವನ್ನು ರೂಪಿಸಲಾಗಿದೆ. ಎರಡೂ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ವಿಸ್ತರಿಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.

error: Content is protected !!