ಹೊಸದಿಗಂತ ಗೋಕರ್ಣ:
ಸಮುದ್ರದ ಅಲೆಗಳ ಅಬ್ಬರದ ನಡುವೆ ಸಾವಿನ ಸುಳಿಗೆ ಸಿಲುಕಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿಗಳು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಕುಡ್ಲೆ ಕಡಲತೀರದಲ್ಲಿ ನಡೆದಿದೆ.
ತೆಲಂಗಾಣದಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಐವರು ಸ್ನೇಹಿತರ ತಂಡವು ಸಮುದ್ರದ ಆಳ ತಿಳಿಯದೆ ನೀರಿಗಿಳಿದಿತ್ತು. ಈ ವೇಳೆ ಶುಭಂ (29) ಮತ್ತು ಆದಿತ್ಯ (28) ಎಂಬುವವರು ಇದ್ದಕ್ಕಿದ್ದಂತೆ ಸಮುದ್ರದ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು.
ಪ್ರವಾಸಿಗರು ಸಂಕಷ್ಟದಲ್ಲಿರುವುದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಮಂಜುನಾಥ್ ಹರಿಕಂತ್ರ ಅವರು ತಕ್ಷಣ ಸಮುದ್ರಕ್ಕೆ ಧುಮುಕಿ, ಪ್ರಾಣದ ಹಂಗು ತೊರೆದು ಇಬ್ಬರನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದರು. ಈ ಕಾರ್ಯಾಚರಣೆಯಲ್ಲಿ ಪ್ರವಾಸಿ ಮಿತ್ರ ಗಜೇಂದ್ರ ಗೌಡ, ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಸಾಹಿಲ್ ಹರಿಕಂತ್ರ, ಕಾಂತೇಶ್ ಹರಿಕಂತ್ರ ಹಾಗೂ ಸ್ಥಳೀಯ ಸುರೇಶ್ ಗೌಡ ಸಾಥ್ ನೀಡಿದರು.
ಸಮುದ್ರ ಇಂದು ಪ್ರಕ್ಷುಬ್ಧವಾಗಿದ್ದು ನೀರಿಗಿಳಿಯಬೇಡಿ ಎಂದು ಜೀವರಕ್ಷಕ ಸಿಬ್ಬಂದಿಗಳು ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಾಹಸಕ್ಕೆ ಮುಂದಾದದ್ದೇ ಈ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಇಬ್ಬರು ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ.



